ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಮಹತ್ವದ ಸೌಲಭ್ಯಗಳನ್ನು ಘೋಷಿಸಿದೆ. ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯೊಂದಿಗೆ ದೇಶದ ಯಾವುದೇ ಭಾಗದಿಂದ PF ಹಾಗೂ EPS ಸೇವೆಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದ್ದು, ₹5 ಲಕ್ಷದವರೆಗಿನ ಕ್ಲೇಮ್‌ಗಳ ವೇಗದ ಇತ್ಯರ್ಥ, ಅಂತಿಮ ಸೆಟಲ್‌ಮೆಂಟ್‌ವರೆಗೆ ಬಡ್ಡಿ ಲೆಕ್ಕ ಹಾಗೂ ಉದ್ಯೋಗ ಬದಲಿಸಿದಾಗ PF ಖಾತೆಯ ಸ್ವಯಂಚಾಲಿತ ವರ್ಗಾವಣೆ ಸೇರಿದಂತೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು EPFO ಸೇವೆಗಳನ್ನು ಮತ್ತಷ್ಟು ವೇಗವಾಗಿ ಮತ್ತು ಪಾರದರ್ಶಕವಾಗಿ ಮಾಡಲು ಹೊಸ ಕೇಂದ್ರೀಕೃತ ಐಟಿ (Centralized IT) ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕ EPFO ಕಚೇರಿಗಳಲ್ಲಿರುವ ಸದಸ್ಯರ ದಾಖಲೆಗಳನ್ನು ಒಂದೇ ರಾಷ್ಟ್ರೀಯ ಡೇಟಾಬೇಸ್‌ಗೆ ಸೇರಿಸಲಾಗಿದೆ. ಇದರಿಂದ PF ಕ್ಲೇಮ್‌ಗಳ ಪ್ರಕ್ರಿಯೆ, ಬಡ್ಡಿ ಜಮೆ ಹಾಗೂ ಇತರೆ ಸೇವೆಗಳು ಹೆಚ್ಚು ವೇಗವಾಗಿ ಪೂರ್ಣಗೊಳ್ಳಲಿವೆ.2025-26ನೇ ಹಣಕಾಸು ವರ್ಷಕ್ಕೆ 8.25 ಶೇಕಡಾ ಬಡ್ಡಿಯನ್ನು EPFO ಜಮೆ ಮಾಡುತ್ತಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆದಾರರ ಖಾತೆಗೆ ಬಡ್ಡಿ ಜಮೆಯಾಗಲಿದೆ. ಮೊದಲ ಬಾರಿಗೆ ಸಂಪೂರ್ಣ ಆಟೋ ಪ್ರೊಸೆಸಿಂಗ್ ವ್ಯವಸ್ಥೆಯ ಮೂಲಕ ಬಡ್ಡಿ ಜಮೆ ಮಾಡಲಾಗುತ್ತಿದೆ.
ಇನ್ನು ₹5 ಲಕ್ಷದವರೆಗಿನ PF ಕ್ಲೇಮ್‌ಗಳನ್ನು ಪೇಪರ್‌ಲೆಸ್ ವಿಧಾನದಲ್ಲಿ ಸ್ವಯಂಚಾಲಿತವಾಗಿ (Auto Settlement) ಇತ್ಯರ್ಥಗೊಳಿಸಲಾಗುತ್ತದೆ. ಕ್ಲೇಮ್ ಅನುಮೋದನೆಯಾದ ದಿನವೇ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದ್ದು, ಸಾಮಾನ್ಯವಾಗಿ ಮೂರು ದಿನಗಳೊಳಗೆ ಕ್ಲೇಮ್ ಇತ್ಯರ್ಥ ಆಗಲಿದೆ.
EPS ಪಿಂಚಣಿದಾರರಿಗೆ ದೊಡ್ಡ ಅನುಕೂಲ
ಹೊಸ ಐಟಿ ವ್ಯವಸ್ಥೆಯಿಂದ EPS (Employees’ Pension Scheme) ಪಿಂಚಣಿದಾರರು ದೇಶದ ಯಾವುದೇ EPFO ಕಚೇರಿಯಿಂದ ಸೇವೆ ಪಡೆಯಬಹುದು. ಜೀವನ ಪ್ರಮಾಣಪತ್ರ (Life Certificate)ವನ್ನು ಸಹ ಯಾವುದೇ ಕಚೇರಿಯಲ್ಲಿ ಸಲ್ಲಿಸಬಹುದು. ಇದಲ್ಲದೆ, ದೇಶದ ಯಾವುದೇ ಭಾಗದಲ್ಲಿದ್ದರೂ ತಮ್ಮ ಬ್ಯಾಂಕ್ ಖಾತೆಯ ಮೂಲಕ ಪಿಂಚಣಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ತಮ್ಮ PF ಖಾತೆ ವ್ಯಾಪ್ತಿಯ ಶಾಖಾ ಕಚೇರಿಯ ಮೂಲಕವೇ ಪಿಂಚಣಿ ಪಡೆಯಬೇಕಾಗಿತ್ತು.
PF ಅಂತಿಮ ಸೆಟಲ್‌ಮೆಂಟ್‌ನಲ್ಲಿ ಹೊಸ ನಿಯಮ
ಈಗಿನಿಂದ PF ಅಂತಿಮ ಸೆಟಲ್‌ಮೆಂಟ್ ವೇಳೆ ಪಾವತಿ ಅನುಮೋದನೆ (Approval) ದಿನಾಂಕದವರೆಗೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಈ ಹಿಂದೆ ಹಿಂದಿನ ತಿಂಗಳ ಕೊನೆಯ ದಿನದವರೆಗೆ ಮಾತ್ರ ಬಡ್ಡಿ ಲೆಕ್ಕಿಸಲಾಗುತ್ತಿತ್ತು.
ಉದ್ಯೋಗ ಬದಲಿಸಿದರೆ PF ಖಾತೆ ಸ್ವಯಂಚಾಲಿತ ವರ್ಗಾವಣೆ
ಆಧಾರ್‌ಗೆ ಲಿಂಕ್ ಆಗಿರುವ UAN ಹೊಂದಿರುವ ಸದಸ್ಯರು ಉದ್ಯೋಗ ಬದಲಿಸಿದರೆ, ಅವರ PF ಖಾತೆ ಹೊಸ ಸಂಸ್ಥೆಗೆ ಸ್ವಯಂಚಾಲಿತವಾಗಿ ವರ್ಗಾವಣೆ ಆಗಲಿದೆ. ಜೊತೆಗೆ, ಪಿಂಚಣಿ ಅರ್ಹತೆಗೆ ಅಗತ್ಯವಿರುವ ಸೇವಾ ಇತಿಹಾಸ (Service History) ಕೂಡ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ.
ಈ ಮೊದಲು ಇದಕ್ಕಾಗಿ ಸದಸ್ಯರು ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತಿತ್ತು ಹಾಗೂ EPFO ಕಚೇರಿಯ ಅನುಮೋದನೆ ಅಗತ್ಯವಿತ್ತು. ಆದರೆ ಈಗ ಯಾವುದೇ ಕ್ಲೇಮ್ ಸಲ್ಲಿಸದೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕ್ಲೇಮ್ ವೇಳೆ ಹೊಸ ಮಾಹಿತಿ ವ್ಯವಸ್ಥೆ
ಇನ್ನು ಮುಂದೆ PF ಕ್ಲೇಮ್ ಸಲ್ಲಿಸುವಾಗ ಸದಸ್ಯರಿಗೆ ವಿತ್‌ಡ್ರಾ (Withdrawal) ಮಿತಿಯ ಕುರಿತು ಮುಂಚಿತ ಮಾಹಿತಿ ನೀಡಲಾಗುತ್ತದೆ. ಇದರಿಂದ ಕ್ಲೇಮ್ ತಿರಸ್ಕಾರಗಳು ಕಡಿಮೆಯಾಗಲಿವೆ. ಜೊತೆಗೆ, ವಿತ್‌ಡ್ರಾ ಸಂಬಂಧಿತ ಎಲ್ಲಾ ಮಾಹಿತಿಯನ್ನು SMS ಮೂಲಕವೂ ಸದಸ್ಯರಿಗೆ ಕಳುಹಿಸಲಾಗುತ್ತದೆ.

