ರಾಜಾಸೀಟು ಬಳಿಯ ಕೂರ್ಗ್ ವಿಲೇಜ್ ಅನ್ನು ಬಳಸಿಕೊಳ್ಳುವ ಕುರಿತು ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಾಸೀಟು ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ರಾಜಾಸೀಟು ಅಭಿವೃದ್ಧಿ ಸಮಿತಿ ಸದಸ್ಯ ಮೋಂತಿ ಗಣೇಶ್ ಇತರರು ಪಾಲ್ಗೊಂಡಿದ್ದರು.
‘ಕೂರ್ಗ್ ವಿಲೇಜ್’ ಅನ್ನು ಆಕರ್ಷಣೀಯಗೊಳಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ರಾಜಾಸೀಟು ಬಳಿ ಇರುವ ಟಿಕೆಟ್ ಕೌಂಟರ್ ಅನ್ನು ಕೂರ್ಗ್ ವಿಲೇಜ್‍ಗೆ ಸ್ಥಳಾಂತರಿಸಿದರೆ ಹೇಗೆ? ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸಲಹೆ ನೀಡಿದರು.
ಕೂರ್ಗ್ ವಿಲೇಜ್ ಅನ್ನು ಅಭಿವೃದ್ಧಿಪಡಿಸಿ ಸ್ಥಳೀಯ ಸ್ವಸಹಾಯ ಗುಂಪುಗಳಿಗೆ ಅವಕಾಶ ಕಲ್ಪಿಸುವುದು ಉದ್ದೇಶವಾಗಿತ್ತು. ಆದರೆ ಯಾರೂ ಸಹ ಮುಂದೆ ಬರಲಿಲ್ಲ, ಆದ್ದರಿಂದ ಈಗಾಗಲೇ ಸ್ಥಳೀಯವಾಗಿ ವ್ಯಾಪಾರ ಮಾಡುತ್ತಿರುವವರಿಗೆ ಹಾಗೂ ಆಸಕ್ತರಿಗೆ ಬಾಡಿಗೆ ಆಧಾರದಲ್ಲಿ ಅವಕಾಶ ಮಾಡಿಕೊಡಲು ಚಿಂತನೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಶಶಿಧರ್ ಹೇಳಿದರು.
ಮೋಂತಿ ಗಣೇಶ್ ಮಾತನಾಡಿ, “ಕೂರ್ಗ್ ವಿಲೇಜ್ ಅಭಿವೃದ್ಧಿ ಪಡಿಸವುದರ ಜೊತೆಗೆ ನಗರದ ನೆಹರು ಮಂಟಪಕ್ಕೆ ಇನ್ನಷ್ಟು ಕಾಯಕಲ್ಪ ಕಲ್ಪಿಸಬೇಕು. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು” ಎಂದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಟಿಕೆಟ್ ಕೌಂಟರ್ ನಿರ್ಮಾಣ ಹಾಗೂ ಮತ್ತಿತರ ಸೌಲಭ್ಯ ಸಂಬಂದ ಅಗತ್ಯ ಕ್ರಮವಹಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಮಾಹಿತಿ ಕೇಂದ್ರ, ಪ್ರವಾಸಿ ಮಿತ್ರ, ಆಹಾರ ಕೇಂದ್ರ, ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಸೋಲಾರ್ ಲೈಟ್ ಅಳವಡಿಕೆ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಪುಟಾಣಿ ರೈಲು ನಿರ್ಮಾಣ, ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

