HomeKarnatakaBIG NEWS: ಮೇ ವೇಳೆಗೆ ತುಂಗಭದ್ರಾ ಡ್ಯಾಂನ ಎಲ್ಲಾ ಕ್ರಸ್ಟ್ ಗೇಟ್ ಗಳ ಬದಲಾವಣೆ ಪೂರ್ಣ:...

BIG NEWS: ಮೇ ವೇಳೆಗೆ ತುಂಗಭದ್ರಾ ಡ್ಯಾಂನ ಎಲ್ಲಾ ಕ್ರಸ್ಟ್ ಗೇಟ್ ಗಳ ಬದಲಾವಣೆ ಪೂರ್ಣ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಟಿ.ಎ. ಶರವಣ, ಟಿಬಿ ಅಣೆಕಟ್ಟು ಕ್ರೇಸ್ಟ್ ಗೇಟ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಬಿ ಅಣೆಕಟ್ಟಿನ ಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದದು. ಶರವಣ ಹಾಗೂ ಇತರ ಸದಸ್ಯರನ್ನು ನಾನು ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿ ಕೊಡುತ್ತೇನೆ, ಹೋಗಿ ನೋಡಲಿ. ಅಲ್ಲಿ ಕ್ರೆಸ್ಟ್ ಗೇಟ್ ತುಂಡರಿಸಿದಾಗ, ಅಣೆಕಟ್ಟು ಸಂಪೂರ್ಣ ಅಲ್ಲಾಡಿದಂತೆ ಭಾಸವಾಗಿತ್ತು. ನಾವು ಕೇವಲ 7 ದಿನಗಳಲ್ಲಿ ದುರಸ್ತಿ ಮಾಡಿದೆವು. ಆಗ ಜನಾರ್ದನ ರೆಡ್ಡಿ ಏನು ಹೇಳಿಕೆ ಕೊಟ್ಟಿದ್ದರು ಎಂಬುದು ಗೊತ್ತಿದೆ. ಆಗ ನಾನು ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂದು ಹೇಳಿದ್ದೆ. ನಂತರ ನಾವು ರಾಜ್ಯದ ಎಲ್ಲಾ ಅಣೆಕಟ್ಟುಗಳ ಅಧ್ಯಯನ ನಡೆಸಿ ಹಳೇ ಗೇಟ್ ಗಳ ಬದಲಾವಣೆಗೆ ತೀರ್ಮಾನ ಮಾಡಿದೆವು. ಮೊದಲ ಹಂತದಲ್ಲಿ ಟಿಬಿ ಡ್ಯಾಂ ಗೇಟ್ ಬದಲಿಸುತ್ತಿದ್ದೇವೆ. ಪತ್ರಿಕೆಯಲ್ಲಿ ಮಾರ್ಚ್ 10ರ ವೆರೆಗೆ 14 ಗೇಟ್ ಬದಲಿಸಲಾಗಿದ್ದು, ತಜ್ಞರ ಪ್ರಕಾರ ಒಂದು ಕ್ರೆಸ್ಟ್ ಗೇಟ್ ಅಳವಡಿಕೆಗೆ 7 ದಿನಗಳ ಕಾಲಾವಕಾಶ ಬೇಕು. ಹಲವು ಗೇಟ್ ಗಳ ಅಳವಡಿಕೆ ಕಾರ್ಯ ನಡೆದರೆ ಈ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ನಾವು ಟಿಬಿ ಡ್ಯಾಂ ನ ಎಲ್ಲಾ ಗೇಟ್ ಬದಲಿಸುವ ತೀರ್ಮಾನ ಮಾಡಿದ್ದು, 19ನೇ ಸ್ಟಾಪ್ ಲಾಗ್ ಗೇಟ್ ತೆರವುಗೊಳಿಸಿ ಸ್ಪಿಲ್ ಗೇಟ್ ಅಳವಡಿಕೆಗೆ 2025 ಏಪ್ರಿಲ್ 24ರಂದು ಅಹಮದಾಬಾದಿನ ಹಾರ್ಡ್ ವೇರ್ ಟೂಲ್ ಅಂಡ್ ಮಷಿನರಿ ಪ್ರಾಜೆಕ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 34.48 ಕೋಟಿ ರೂ. ವೆಚ್ಚದಲ್ಲಿ ಉಳಿದ 32 ಸ್ಪಿಲ್ ವೇ ಗೇಟ್ ಅಳವಡಿಕೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಸಲು ಇದೇ ಸಂಸ್ಥೆಯೊಂದಿಗೆ ಜೂನ್ 10, 2025ರಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. 25 ಗೇಟ್ ಗಳ ಫ್ಯಾಬ್ರಿಕೇಶನ್ ಕೆಲಸ ಮುಗಿದಿದ್ದು, 2 ಗೇಟ್ ಗಳ ಕೆಲಸ ನಡೆಯುತ್ತಿದೆ. 26 ಗೇಟ್ ಗಳನ್ನು ತೆಗೆಯಲಾಗಿದ್ದು, 2 ಗೇಟ್ ಗಳ ತೆರವು ಕಾರ್ಯ ನಡೆಯುತ್ತಿದೆ. ಇದರಲ್ಲಿ 14 ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 3 ಗೇಟ್ ಗಳ ಕಾರ್ಯ ಪ್ರಕ್ರಿಯೆಯಲ್ಲಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಗೇಟ್ ಬದಲಾವಣೆ ಮುಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ನವಲಿ ಸಮತೋಲಿತ ಜಲಾಶಯ ನಿರ್ಮಾಣ ವಿಚಾರದಲ್ಲಿ ಆಂಧ್ರ ಪ್ರದೇಶದವರು ಮಾತುಕತೆಗೆ ಬರುತ್ತಿಲ್ಲ. ಕೆಲವರು ಪರ್ಯಾಯ ಮಾರ್ಗಗಳ ಸಲಹೆ ನೀಡಿದ್ದು, ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡುತ್ತಿಲ್ಲ. ಈ ಅಣೆಕಟ್ಟು ನಮ್ಮ ಆಸ್ತಿ. ಈ ವಿಚಾರದಲ್ಲಿ ಕೇವಲ ಕರ್ನಾಟಕ ಏಕಾಂಗಿಯಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮೂರು ರಾಜ್ಯದವರು ಸೇರಿ ತೀರ್ಮಾನ ಮಾಡಬೇಕು. ನೀರು ಹರಿದು ಸಮುದ್ರಕ್ಕೆ ಹೋಗುತ್ತಿದೆ. ಇದನ್ನು ಉಳಿಸಿ ಜನರಿಗೆ ನೀಡಲು ನಿಮ್ಮೆಲ್ಲರ ರಾಜಕೀಯ ಬದ್ಧತೆ, ಶಕ್ತಿ ನೀಡಿದರೆ ನಾವು ವ್ಯವಸ್ಥೆ ಮಾಡಬಹುದು. ಗೇಟ್ ಬದಲಾವಣೆ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಿನ್ನೀರ ಭೂ ಸಂತ್ರಸ್ತರಿಗೆ ಪರಿಹಾರ ವಿಚಾರವಾಗಿ ರೈತರಿಗೆ ಭೂ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಂದ ಕಡತ ತರಿಸಿಕೊಂಡು ಕೂಡಲೇ ಪರಿಹಾರ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular