ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ( ಫೆಬ್ರವರಿ 22 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯದಲ್ಲಿ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್‌ಗಳ ಹೀನಾಯ ಸೋಲನ್ನು ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 188 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 18.4 ಓವರ್‌ಗಳಲ್ಲಿ 111 ರನ್ ಕಲೆಹಾಕಿ ಆಲ್‌ಔಟ್ ಆಯಿತು.
ಹೀಗೆ ಹೀನಾಯ ಸೋಲನ್ನು ಕಂಡ ಬೆನ್ನಲ್ಲೇ ಭಾರತ ತಂಡದ ವಿರುದ್ಧ ಕ್ರಿಕೆಟ್ ಪ್ರಿಯರು ಹಾಗೂ ಟೀಮ್ ಇಂಡಿಯಾ ಅಭಿಮಾನಿಗಳು ಭಾರೀ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪಂದ್ಯಕ್ಕೂ ಮುನ್ನ ಅತಿಯಾದ ವಿಶ್ವಾಸ ವ್ಯಕ್ತಪಡಿಸಿ ಪಂದ್ಯದಲ್ಲಿ ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ನೆಲಕಚ್ಚಿದ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ದೊಡ್ಡ ಮಟ್ಟದಲ್ಲಿ ಟ್ರೋಲ್ ನಡೆದಿವೆ.
ಇನ್ನು ಕೆಲವರು ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡ ಬಳಿಕ ಕ್ರಿಕೆಟ್‌ನಲ್ಲೂ ಸಹ ರಾಜಕೀಯ ಆರಂಭವಾಗಿದೆ, ಸ್ವತಃ ಆಟಗಾರರು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಏಷ್ಯಾ ಕಪ್ ಸಮಯದಲ್ಲಿ ಟೂರ್ನಿಯ ಬಗ್ಗೆ ಮಾತನಾಡಿದ್ದ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಕೇಳಿದರೆ ನರೇಂದ್ರ ಮೋದಿಯನ್ನು ಉಲ್ಲೇಖಿಸಿ ಮೋದಿಯಂತಹ ನಾಯಕ ಫ್ರಂಟ್ ಫುಟ್‌ನಲ್ಲಿ ಆಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರೆ ನಾವೆಲ್ಲ ಚೆನ್ನಾಗಿಯೇ ಪ್ರದರ್ಶನ ನೀಡುತ್ತೇವೆ ಎಂದಿದ್ದರು. ಆ ವಿಡಿಯೊವನ್ನು ಈಗ ಹಂಚಿಕೊಂಡಿರುವ ಅನೇಕ ಕ್ರಿಕೆಟ್ ಪ್ರಿಯರು ಓರ್ವ ನಾಯಕ ಹೀಗೆ ರಾಜಕೀಯ ವ್ಯಕ್ತಿಗೆ ಬಕೆಟ್ ಹಿಡಿದಿದ್ದನ್ನು ಹಿಂದೆ ನಾವು ಕಂಡಿಲ್ಲ. ಕೊಹ್ಲಿ ಹಾಗೂ ರೋಹಿತ್ ನಾಯಕರಾಗಿದ್ದಾಗ ಈ ರೀತಿಯ ಬಾಲಿಷ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಸೂರ್ಯಕುಮಾರ್ ಯಾದವ್ ಮೋದಿಗೆ ಬಿಲ್ಡಪ್ ಕೊಟ್ಟು ಬಕೆಟ್ ಹಿಡಿಯುವುದನ್ನು ಬಿಟ್ಟು ಆಟದತ್ತ ಗಮನಹರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

