ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ನಾಲ್ಕನೇ ಪಂದ್ಯ ನಡೆಯುತ್ತಿದ್ದು, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದು, ವಿಂಡೀಸ್ ಶಿಮ್ರಾನ್ ಹೆಟ್ಮೈರ್ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿ ಜಿಂಬಾಬ್ವೆಗೆ 255 ರನ್‌ಗಳ ಅತಿ ಕಠಿಣ ಗುರಿಯನ್ನು ನೀಡಿದೆ.
ಇದು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿಹೆಚ್ಚು ತಂಡದ ಮೊತ್ತವಾಗಿದ್ದು, ಒಟ್ಟಾರೆ ಟಿ ಟ್ವೆಂಟಿ ವಿಶ್ವಕಪ್ ಇತಿಹಾದಲ್ಲಿ ದಾಖಲಾದ ಎರಡನೇ ಅತಿದೊಡ್ಡ ತಂಡದ ಮೊತ್ತವಾಗಿದೆ. ಈ ಹಿಂದೆ 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕೀನ್ಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿತ್ತು.
ವೆಸ್ಟ್ ಇಂಡೀಸ್ 54 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಸಾಮಾನ್ಯ ಆರಂಭ ಪಡೆದುಕೊಂಡರೂ ಸಹ ಮೂರನೇ ವಿಕೆಟ್‌ಗೆ ಜತೆಯಾದ ಶಿಮ್ರಾನ್ ಹೆಟ್ಮೈರ್ ಹಾಗೂ ರೊವ್‌ಮನ್ ಪೊವೆಲ್ ಅಬ್ಬರದ ಶತಕದ ಜತೆಯಾಟದ ಸಹಾಯದಿಂದ ಪುಟಿದೆದ್ದು ಅಬ್ಬರಿಸಿತು. ಹೆಟ್ಮೈರ್ 34 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 85 ರನ್ ಚಚ್ಚಿದರೆ, ಪೊವೆಲ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 59 ರನ್ ಬಾರಿಸಿದರು. ಇನ್ನುಳಿದಂತೆ ರೊಮಾರಿಯೊ ಶೆಫರ್ಡ್ 21, ಜೇಸನ್ ಹೋಲ್ಡರ್ 13, ಮ್ಯಾಥ್ಯೂ ಫೋರ್ಡ್ ಅಜೇಯ 1 ರನ್ ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಶೆರ್ಫೇನ್ ರುದರ್‌ಫೋರ್ಡ್ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸಿದರು.
ಜಿಂಬಾಬ್ವೆ ಪರ ರಿಚರ್ಡ್ ಎನ್‌ಗರಾವ ಹಾಗೂ ಬ್ಲೆಸಿಂಗ್ ಮುಜರಬಾನಿ ತಲಾ ಎರಡು ವಿಕೆಟ್ ಪಡೆದರೆ, ಬ್ರಾಡ್ ಎವನ್ಸ್ ಹಾಗೂ ಗ್ರೇಮ್ ಕ್ರೆಮರ್ ತಲಾ ಒಂದೊಂದು ವಿಕೆಟ್ ಪಡೆದರು.

