HomeInternationalನೇಪಾಳದಲ್ಲಿ ಭೀಕರ ಪ್ರವಾಹ: ಬೆಳಗಾವಿಯ ಇಬ್ಬರು ಸೇರಿ 17 ಕನ್ನಡಿಗರು ನಾಪತ್ತೆ: ಇಶಾ ಫೌಂಡೇಷನ್ ನ...

ನೇಪಾಳದಲ್ಲಿ ಭೀಕರ ಪ್ರವಾಹ: ಬೆಳಗಾವಿಯ ಇಬ್ಬರು ಸೇರಿ 17 ಕನ್ನಡಿಗರು ನಾಪತ್ತೆ: ಇಶಾ ಫೌಂಡೇಷನ್ ನ 80 ಜನರು ಮಿಸ್ಸಿಂಗ್

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ರಣ ಭೀಕರ ಪ್ರವಾಹದಲ್ಲಿ 460ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 1500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೇಪಾಳ ಪ್ರವಾಸಕ್ಕೆ ಹೋಗಿದ್ದ ಕರ್ನಾಟಕದ ಹಲವರು ಪ್ರವಾಹದಲ್ಲಿ ಸಿಲುಕಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ.

ರಾಜ್ಯದ ವಿವಿಧ ಭಾಗಗಳಿಂದ ನೇಪಾಳಕ್ಕೆ ತೆರಳಿದ್ದ ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 17 ಕನ್ನಡಿಗರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಐವರು ಪ್ರವಾಹದಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅವರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಇಶಾ ಫೌಂಡೇಷನ್ ಮೂಲಕ ನೇಪಾಳಕ್ಕೆ ತೆರಳಿದ್ದ ಪ್ರವಾಸಿಗರ ತಂಡದಲ್ಲಿದ್ದ ಸುಮಾರು 80 ಮಂದಿ ನಾಪತ್ತೆಯಾಗಿದ್ದಾರೆ. ಈ ತಂಡದಲ್ಲಿ ವಿದೇಶಿಗರ ಜತೆಗೆ ಹಲವು ಕನ್ನಡಿಗರೂ ಇದ್ದಾರೆ. ಧಾರವಾಡ ಮೂಲದ ರಾಕೇಶ್ ನಾಯಕ್ ಅವರು ಕುಟುಂಬದೊಂದಿಗೆ ಆಸ್ಟ್ರೇಲಿಯಾದಲ್ಲಿದ್ದು, ಇಶಾ ಫೌಂಡೇಷನ್ ಮೂಲಕ ನೇಪಾಳ ಪ್ರವಾಸ ಕೈಗೊಂಡಿದ್ದರು. ಎಸ್3 ಗುಂಪಿನಲ್ಲಿದ್ದ ರಾಕೇಶ್ ಅವರು ಬೆಳಗಿನ ಜಾವ ಸುಮಾರು 3.30ಕ್ಕೆ ಸಂಬಂಧಿಕರಿಗೆ ಕರೆ ಮಾಡಿದ್ದರು. ಬಳಿಕ ಅವರ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ಇಬ್ಬರು ನೇಪಾಳದಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಆರು ಕುಟುಂಬಗಳ 15 ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಮೂಲದ ಇಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಕಲಬುರಗಿ ಮೂಲದ ಮಲ್ಲಿಕಾರ್ಜುನ್ ಅವರು ನೇಪಾಳದ ಕಠ್ಮಂಡುವಿನಲ್ಲಿ ಸುರಕ್ಷಿತವಾಗಿದ್ದಾರೆ. ಅವರು ಪ್ರವಾಹದ ಭೀಕರತೆಯನ್ನು ವಿವರಿಸಿದ್ದಾರೆ. ಮಲ್ಲಿಕಾರ್ಜುನ್ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಮಾತನಾಡಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಧೈರ್ಯ ತುಂಬಿದ್ದಾರೆ.

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ನೇಪಾಳದಲ್ಲಿರುವವರು, ಅವರ ಸಂಬಂಧಿಕರು ಹಾಗೂ ಪ್ರವಾಸ ಆಯೋಜಕರು ಅಗತ್ಯ ಮಾಹಿತಿಯನ್ನು ಸರ್ಕಾರದ ಗೂಗಲ್ ಫಾರ್ಮ್‌ನಲ್ಲಿ ಸಲ್ಲಿಸುವಂತೆ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ನಾಪತ್ತೆಯಾಗಿರುವವರ ಕುರಿತು ಮಾಹಿತಿ ನೀಡಲು 1070 / 080-22253707 ಹೆಲ್ಪ್‌ಲೈನ್‌ ಸಂಖ್ಯೆಗಳಿಗೂ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular