ನೇಪಾಳದ ಭೋಟೆ ಕೋಶಿ–ತ್ರಿಶೂಲಿ ನದಿ ಜಲಾನಯನ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಟಿಬೆಟ್ ಭಾಗದಿಂದ ಏಕಾಏಕಿ ಪ್ರವಾಹದ ನೀರು ಹರಿದು ರಸುವಾ ಸೇರಿದಂತೆ ನೆರೆ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಭೂಕಂಪದಿಂದ ಹಿಮಪಾತ ಸಂಭವಿಸಿ, ಅದರ ಪರಿಣಾಮವಾಗಿ ಈ ಭೀಕರ ಪ್ರವಾಹ ಉಂಟಾಗಿರಬಹುದು ಎಂದು ನೇಪಾಳದ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಆದರೆ ಪ್ರವಾಹಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ದುರಂತದ ಹಿನ್ನೆಲೆಯಲ್ಲಿ ಭಾರತದ ಬಿಹಾರದಲ್ಲಿ ಸಂಭವನೀಯ ಪ್ರವಾಹದ ಅಪಾಯದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಮಹಾರಾಜ್ಗಂಜ್ ಮತ್ತು ಕುಶಿನಗರ ಜಿಲ್ಲೆಗಳನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದೆ. ಗಂಡಕ್–ನಾರಾಯಣಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.
ನೇಪಾಳದ ರಸುವಾ, ನುವಾಕೋಟ್, ಧಾದಿಂಗ್, ಚಿತ್ವಾನ್ ಮತ್ತು ಗೋರ್ಖಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಿಲುಕಿರುವವರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
384 ಪ್ರವಾಸಿಗರು ನಾಪತ್ತೆ
ನೇಪಾಳದ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ಮಾಹಿತಿ ಪ್ರಕಾರ, ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಬಳಿಕ 384 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ನಾಗರಿಕರು ಸೇರಿದ್ದಾರೆ.
ನಾಪತ್ತೆಯಾದವರಲ್ಲಿ ಕನಿಷ್ಠ 105 ಮಂದಿ ಭಾರತೀಯ ಪ್ರವಾಸಿಗರು ಎಂದು ಗುರುತಿಸಲಾಗಿದೆ. ಇವರಲ್ಲಿ 59 ಮಂದಿ ಸಮ್ರಾಟ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮೂಲಕ ಪ್ರಯಾಣಿಸುತ್ತಿದ್ದರೆ, 46 ಮಂದಿ ಲೀಫ್ ಹಾಲಿಡೇ ಸಂಸ್ಥೆಯೊಂದಿಗೆ ತೆರಳಿದ್ದರು.
ಇನ್ನೂ ಕೆಲವು ವಿದೇಶಿ ಪ್ರವಾಸಿಗರ ರಾಷ್ಟ್ರೀಯತೆ ದೃಢಪಟ್ಟಿಲ್ಲ. ಹೀಗಾಗಿ ನಾಪತ್ತೆಯಾಗಿರುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರವಾಸೋದ್ಯಮ ಮಂಡಳಿ, ಟೂರಿಸ್ಟ್ ಪೊಲೀಸ್, ಪ್ರವಾಸ ಸಂಸ್ಥೆಗಳು, ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳು ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿವೆ.
ಭೀಕರ ಪ್ರವಾಹಕ್ಕೆ ತತ್ತರಿಸಿದ ನೇಪಾಳ
ಟಿಬೆಟ್ ಗಡಿಯ ಸಮೀಪದ ಮಧ್ಯ ನೇಪಾಳದ ರಸುವಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ ಹಠಾತ್ ಪ್ರವಾಹ ಸಂಭವಿಸಿತು. ಬೆಳಗ್ಗೆ ಸುಮಾರು 9 ಗಂಟೆಗೆ ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ, ವಾಹನಗಳು, ಸರಕುಗಳು ಮತ್ತು ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆಯನ್ನೂ ಕೊಚ್ಚಿಕೊಂಡು ಹೋಯಿತು.
ಪ್ರವಾಹದಿಂದ ಹಲವು ವಸತಿ ಪ್ರದೇಶಗಳು ಹಾನಿಗೊಳಗಾಗಿವೆ. ಒಟ್ಟು 354 ಮೆಗಾವ್ಯಾಟ್ ಸಾಮರ್ಥ್ಯದ ಕನಿಷ್ಠ 8 ಜಲವಿದ್ಯುತ್ ಯೋಜನೆಗಳು ಹಾಗೂ ನಿರ್ಮಾಣ ಹಂತದಲ್ಲಿದ್ದ 5 ಯೋಜನೆಗಳು ಹಾನಿಗೊಳಗಾಗಿವೆ.
ಪ್ರವಾಹದ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಟಿಬೆಟ್ ಭಾಗದಲ್ಲಿ ಹಿಮನದಿ ಸರೋವರ ಒಡೆದು ಪ್ರವಾಹ ಉಂಟಾಗಿರುವ ಸಾಧ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು 12 ಸೇನಾ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ.
ಸಾವಿನ ಸಂಖ್ಯೆ 16ಕ್ಕೆ ಏರಿಕೆ
ತ್ರಿಶೂಲಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಬಾಗ್ಮತಿ ಪ್ರಾಂತ್ಯ ಪೊಲೀಸ್ ಕಚೇರಿ ತಿಳಿಸಿದೆ.ನುವಾಕೋಟ್ನಲ್ಲಿ 9 ಮಂದಿ, ಧಾದಿಂಗ್ನಲ್ಲಿ 6 ಮಂದಿ ಹಾಗೂ ರಸುವಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೃತರಲ್ಲಿ 7 ಮಹಿಳೆಯರು ಮತ್ತು 8 ಪುರುಷರು ಇದ್ದಾರೆ. ಇನ್ನೊಬ್ಬ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಪ್ರವಾಹದಿಂದ ಗಾಯಗೊಂಡ 36 ಮಂದಿಯನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ. ಇವರಲ್ಲಿ ರಸುವಾದ 13 ಮಂದಿ, ನುವಾಕೋಟ್ನ 19 ಮಂದಿ ಮತ್ತು ಧಾದಿಂಗ್ನ 3 ಮಂದಿ ಸೇರಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ಹಾನಿ ಹಾಗೂ ಸಾವು-ನೋವಿನ ಪ್ರಮಾಣದ ಕುರಿತು ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

