ನೀಟ್ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಪ್ರತಿಭಟನೆ ನಿರೀಕ್ಷೆಗೂ ಮೀರಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಜಮಾಯಿಸಿ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಇನ್ನು ಹಲವಾರು ಮಂದಿ ಜಂತರ್ ಮಂತರ್‌ಗೆ ತೆರಳಿ ಪ್ರತಿಭಟಿಸಿದರೆ, ಇನ್ನೂ ಅನೇಕ ಮಂದಿ ಆನ್‌ಲೈನ್‌ನಲ್ಲಿ ತಮ್ಮ ಬೆಂಬಲವನ್ನು ಪ್ರತಿಭಟನೆಗೆ ಸೂಚಿಸಿದ್ದಾರೆ. ದೆಹಲಿ ಪ್ರತಿಭಟನೆಯ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡು ಆಕ್ರೋಶ ಹೊರಹಾಕಿ ಕೇಂದ್ರ ಸರ್ಕಾರ ಈಗಲಾದರೂ ಪ್ರತಿಕ್ರಿಯಿಸಲಿ ಎಂದು ಟ್ವೀಟ್ ಹಾಗೂ ಪೋಸ್ಟ್‌ಗಳನ್ನು ಮಾಡಿದ್ದಾರೆ.
ಸಾಮಾನ್ಯ ಜನರು ಮಾತ್ರವಲ್ಲದೇ ಕೆಲ ಸೆಲೆಬ್ರಿಟಿಗಳೂ ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತುಟಿ ಬಿಚ್ಚಿದ್ದು, ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಾರೆ. ಕನ್ನಡದಲ್ಲಿ ನಟಿ ನಿಶ್ವಿಕಾ ನಾಯ್ಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೀಗ ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜನರಿಗೆ ಪರಿಸ್ಥಿತಿಯನ್ನು ಅರಿತುಕೊಳ್ಳಿ, ಆಗ ಮಾತ್ರ ಉತ್ತಮ ದೇಶವನ್ನು ರೂಪಿಸಲು ಸಾಧ್ಯ ಎಂದಿದ್ದಾರೆ.
‘ ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು, ಪ್ರಚಾರಕ್ಕಿಂತ ಸತ್ಯ ದೊಡ್ಡದು, ಭಯಕ್ಕಿಂತ ದನಿ ದೊಡ್ಡದು’ ಎಂದು ಬರೆದುಕೊಂಡಿರುವ ಯುವ ರಾಜ್‌ಕುಮಾರ್ ಭಯ ಬಿಡಿ ಎಂದು ಕರೆಕೊಟ್ಟಿದ್ದಾರೆ. ಅಲ್ಲದೇ ‘ಈ ಪೋಸ್ಟ್ ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಮಾನವೀಯತೆಯ ಬಗ್ಗೆ.
ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸುಮ್ಮನೆ ನೋಡುತ್ತಾ ಹೋಗಬಾರದು. ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಒಂದೇ ವಿಚಾರಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವುದು, ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ. ಯಾರು ಹೊಣೆ? ಈ ಪರಿಸ್ಥಿತಿ ತಪ್ಪಿಸಬಹುದಿತ್ತೇ ವಿದ್ಯಾರ್ಥಿಗಳಿಗೆ ಗಾಯಗಳಾಗಲು ಕಾರಣವೇನು? ಇಂತಹ ಘಟನೆಗಳು ಮತ್ತೆ ನಡೆಯದಂತೆ ನಾವು ಏನು ಮಾಡಬೇಕು?’ ಎಂದು ಯುವ ರಾಜ್‌ಕುಮಾರ್ ಪ್ರಶ್ನೆಗಳನ್ನು ಬರೆದುಕೊಂಡಿದ್ದಾರೆ.
‘ಪ್ರತಿಯೊಬ್ಬ ನಾಗರಿಕನಿಗೂ ಮಾಹಿತಿ ತಿಳಿದುಕೊಳ್ಳುವ ಜವಾಬ್ದಾರಿ ಇದೆ. ನೆಲಮಟ್ಟದಲ್ಲಿರುವವರ ಧ್ವನಿಯನ್ನು ಆಲಿಸಿ. ಸತ್ಯಾಂಶಗಳನ್ನು ತಿಳಿದುಕೊಳ್ಳಿ. ಕಷ್ಟದ ಪ್ರಶ್ನೆಗಳನ್ನು ಕೇಳಿ. ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಿ. ಒಂದು ರಾಷ್ಟ್ರ ತನ್ನ ಜನರು ಕಣ್ಣುಮುಚ್ಚಿ ನೋಡುವುದನ್ನು ಬಿಟ್ಟು, ಮಾನವೀಯತೆಯ ಪರ ನಿಂತು, ಹೊಣೆಗಾರಿಕೆಯನ್ನು ಕೇಳಿದಾಗ ಇನ್ನಷ್ಟು ಬಲವಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ. ಏಕೆಂದರೆ ಒಂದು ರಾಷ್ಟ್ರದ ಭವಿಷ್ಯವನ್ನು ಅದರ ಜನರ ಜಾಗೃತಿ, ಮಾನವೀಯತೆ ಮತ್ತು ಹೊಣೆಗಾರಿಕೆ ರೂಪಿಸುತ್ತದೆ’ ಎಂದು ತನ್ನ ಹಿಂಬಾಲಕರಿಗೆ ಪರಿಸ್ಥಿತಿ ಅರಿತುಕೊಂಡು ಸತ್ಯದ ಪರ ನಿಲ್ಲಿ, ಭಯಪಡದೇ ಪ್ರಶ್ನಿಸಿ ಎಂದಿದ್ದಾರೆ.
https://www.instagram.com/p/DbC0V1iGkyS

