ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತ ‘ಪಂಕ್ಚರ್ ಬನಾನೆ ವಾಲೆ’ ( ಪಂಕ್ಚರ್ ಹಾಕುವವರು) ಮತ್ತು ‘ತಾಳ ಬನಾನೆ ವಾಲೆ’ಗಳೇ (ಬೀಗ ತಯಾರಿಸುವವರು) ಹೆಚ್ಚು ಸಂಖ್ಯೆಯಲ್ಲಿದ್ದರು ಎಂದು ಹಿರಿಯ ಬಿಜೆಪಿ ನಾಯಕ ರಮೇಶ್ ಬಿಧುರಿ ಹೇಳಿಕೆ ನೀಡಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ನಾಲಿಗೆಹರಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಕ್ಷಿಣ ದೆಹಲಿಯ ತುಗ್ಲಕಾಬಾದ್‌ನಲ್ಲಿ ಭಾನುವಾರ (ಆಗಸ್ಟ್ 2) ನಡೆದ ‘ಜೆನ್ Z ಸಮಿಟ್’ನಲ್ಲಿ ಮಾತನಾಡುತ್ತಿದ್ದ ಬಿಧುರಿ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕುಟುಂಬದ ವಿರುದ್ಧ ಬಳಸಲಾದ ನಿಂದನೀಯ ಭಾಷೆಯನ್ನು ಟೀಕಿಸಿದರು.
“ಭಾರತದ ಮಕ್ಕಳು ಮೋದಿ ಜಿ ಮತ್ತು ಅವರ ಕುಟುಂಬದ ಬಗ್ಗೆ ಇಂತಹ ಮಾತುಗಳನ್ನು ಆಡಬಹುದೇ? ಅವರು ಪಂಕ್ಚರ್ ರಿಪೇರಿ ಮಾಡುವವರ ಮಕ್ಕಳಾಗಿರಬೇಕು,” ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕರು ಯುವಜನರನ್ನು ತಪ್ಪು ಮಾರ್ಗದಲ್ಲಿ ಕರೆದೊಯ್ದರು ಎಂದು ಪ್ರತಿಭಟನೆಯ ವಿರುದ್ಧ ಆರೋಪಿಸಿದರು.
ಸದ್ಯ ಬಿಧುರಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಮುದಾಯವೊಂದನ್ನು ಗುರಿಯನ್ನಾಗಿಸಿ ನೀಡಿದ ಹೇಳಿಕೆ ಎಂಬ ಟೀಕೆಗೆ ಒಳಗಾಗಿದೆ. ರಾಜ್ಯದಲ್ಲೂ ಸಹ ಇದೇ ರೀತಿ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆಯನ್ನು ನೀಡಿ ಭಾರೀ ಟೀಕೆಗೆ ಒಳಗಾಗಿದ್ದರು. ನೀಟ್‌ಗೂ ಮುಲ್ಲಾನಿಗೂ ಏನು ಸಂಬಂಧ ಎಂದು ಪ್ರಶ್ನಿಸಿ ಎಡವಟ್ಟು ಮಾಡಿಕೊಂಡಿದ್ದರು.

