ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ (Pollution) ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ನಾವು ಉಸಿರಾಡುವ ಗಾಳಿಯಲ್ಲಿರುವ ವಿಷಕಾರಿ ಅಂಶಗಳು ನಮ್ಮ ಶ್ವಾಸಕೋಶದ (Lungs) ಕಾರ್ಯಕ್ಷಮತೆಯನ್ನು ಕುಂದಿಸುತ್ತಿವೆ. ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೋಂಕುಗಳು ನಮ್ಮನ್ನು ಕಾಡುತ್ತಿವೆ. ಆದರೆ, ಭಯ ಬೇಡ ನಿಮ್ಮ ಶ್ವಾಸಕೋಶವನ್ನು ನೈಸರ್ಗಿಕವಾಗಿ ಕ್ಲೀನ್ ಮಾಡಲು ನಮ್ಮ ಅಡುಗೆಮನೆಯಲ್ಲಿರುವ ಈ ಆಹಾರಗಳೇ ಸಾಕು.
ಶ್ವಾಸಕೋಶದ ರಕ್ಷಾ ಕವಚಗಳಿವು:
ನುಗ್ಗೆಕಾಯಿ ಮತ್ತು ಹಸಿರು ಚಹಾ (Green Tea): ಇವೆರಡೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ. ಹಸಿರು ಚಹಾದಲ್ಲಿರುವ ಕ್ವೆರ್ಸೆಟಿನ್ ಅಂಶವು ಮಾಲಿನ್ಯದ ವಿರುದ್ಧ ಹೋರಾಡಲು ನೆರವಾಗುತ್ತದೆ. (ಗಮನಿಸಿ: ದಿನಕ್ಕೆ 2-3 ಕಪ್ ಗ್ರೀನ್ ಟೀ ಸಾಕಷ್ಟಾಗುತ್ತದೆ).
ಶುಂಠಿ: ಪ್ರತಿದಿನ ಶುಂಠಿ ಬಳಸುವುದರಿಂದ ಶ್ವಾಸಕೋಶದ ಒಳಭಾಗದಲ್ಲಿ ಉಂಟಾಗುವ ಸೋಂಕುಗಳನ್ನು ತಡೆಯಬಹುದು. ಇದು ಉಸಿರಾಟದ ಪ್ರದೇಶವನ್ನು ಸ್ವಚ್ಛಗೊಳಿಸಿ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳ ಪವರ್: ಕಿತ್ತಳೆ, ನಿಂಬೆ ಪೇರಲ ಮತ್ತು ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ದೇಹದ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಮಾಲಿನ್ಯದಿಂದ ಶ್ವಾಸಕೋಶದ ಅಂಗಾಂಶಗಳಿಗೆ ಉಂಟಾಗುವ ಹಾನಿಯನ್ನು ತಡೆಯುವ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಮಸಾಲೆ ರಾಣಿ ಅರಿಶಿನ: ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ಶ್ವಾಸಕೋಶದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಸಮಸ್ಯೆ ಇರುವವರಿಗೆ ಅರಿಶಿನವು ರಾಮಬಾಣವಿದ್ದಂತೆ.
ತುಳಸಿ ಎಂಬ ಸಂಜೀವಿನಿ: ಆಯುರ್ವೇದದಲ್ಲಿ ತುಳಸಿಗೆ ಅಗ್ರಸ್ಥಾನ. ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಮಾಲಿನ್ಯಕಾರಕಗಳನ್ನು ಹೊರಹಾಕಲು ತುಳಸಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ಉಸಿರಾಟದ ಮಾರ್ಗವನ್ನು ಸುಗಮಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ದಾಲ್ಚಿನ್ನಿ (Cinnamon) ಚಹಾ;ನಮ್ಮ ಅಡುಗೆಮನೆಯಲ್ಲಿ ಸಾಧಾರಣ ಮಸಾಲೆ ಪದಾರ್ಥವಾಗಿ ಕಾಣುವ ದಾಲ್ಚಿನ್ನಿ (ಚಕ್ಕೆ) ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಂದು ಅದ್ಭುತ ಔಷಧಿಯಾಗಿದೆ. ದೀರ್ಘಕಾಲದ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಒಂದು ವರದಾನವೇ ಸರಿ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಉಸಿರಾಟ ನಾಳದಲ್ಲಿ ಉಂಟಾಗುವ ಅಸ್ವಸ್ಥತೆಗಳನ್ನು ಬುಡ ಸಮೇತ ಸರಿಪಡಿಸುವ ಶಕ್ತಿಯನ್ನು ಹೊಂದಿದೆ.
ನೀವು ಪ್ರತಿ ದಿನ ಸಂಜೆ ಕುಡಿಯುವ ಸಾಧಾರಣ ಚಹಾಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ಒಂದು ಸಣ್ಣ ಚಕ್ಕೆಯ ತುಂಡನ್ನು ಸೇರಿಸಿ ‘ದಾಲ್ಚಿನ್ನಿ ಚಹಾ’ ತಯಾರಿಸಿ ಸೇವಿಸುವುದರಿಂದ, ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಇದು ಶ್ವಾಸಕೋಶವನ್ನು ಶುದ್ಧೀಕರಿಸಿ, ಉಸಿರಾಟ ಸುಲಭವಾಗುವಂತೆ ಮಾಡುತ್ತದೆ. ಇಂದಿನ ಮಾಲಿನ್ಯಭರಿತ ದಿನಗಳಲ್ಲಿ ನಿಮ್ಮ ದಿನಚರಿಯಲ್ಲಿ ಈ ಪುಟ್ಟ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

