ನವದೆಹಲಿ : ದೇಶದ ಪ್ರಮುಖ ನಗರಗಳಲ್ಲಿ ಇಂದು ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಚಾಲಕರ ಶೋಷಣೆ ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ‘ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್’ (IFAT) ಮತ್ತು ತೆಲಂಗಾಣ ಗಿಗ್ ವರ್ಕರ್ಸ್ ಯೂನಿಯನ್ (TGPWU) ನೀಡಿರುವ ‘ಆಲ್ ಇಂಡಿಯಾ ಬ್ರೇಕ್ಡೌನ್’ ಕರೆಗೆ ಚಾಲಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಹೌದು. ದೇಶಾದ್ಯಂತ ಅಪ್ಲಿಕೇಶನ್ ಆಧಾರಿತ ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಲಕ್ಷಾಂತರ ಚಾಲಕರು ಇಂದು (ಫೆಬ್ರವರಿ 7, 2026) ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ‘ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್’ (IFAT) ಮತ್ತು TGPWU ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ‘ಆಲ್ ಇಂಡಿಯಾ ಬ್ರೇಕ್ಡೌನ್’ ಹೆಸರಿನಲ್ಲಿ ಆರು ಗಂಟೆಗಳ ಕಾಲ ಆ್ಯಪ್ಗಳಿಂದ ಲಾಗ್ ಔಟ್ ಆಗುವ ಮೂಲಕ ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಅಗ್ರಿಗೇಟರ್ ಕಂಪನಿಗಳು ಕೋಟಿಗಟ್ಟಲೆ ಲಾಭ ಗಳಿಸುತ್ತಿದ್ದರೆ, ಅತ್ತ ಹಗಲಿರುಳು ದುಡಿಯುವ ಲಕ್ಷಾಂತರ ಚಾಲಕರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ,” ಎಂದು ಸಂಘಟನೆ ದೂರಿದೆ. ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ನಂತಹ ಮಹಾನಗರಗಳಲ್ಲಿ ಕ್ಯಾಬ್ ಮತ್ತು ಆಟೋ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.ಚಾಲಕರ ಹಿತದೃಷ್ಟಿಯಿಂದ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕು,” ಎಂದು ಐಫ್ಯಾಟ್ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್ ಸಾವರ್ಡೇಕರ್ ಆಗ್ರಹಿಸಿದ್ದಾರೆ.
ಚಾಲಕರ ಪ್ರಮುಖ ಬೇಡಿಕೆಗಳೇನು?
ಚಾಲಕರು ತಮ್ಮ ಜೀವನೋಪಾಯದ ರಕ್ಷಣೆಗಾಗಿ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ:
1) ಅಗ್ರಿಗೇಟರ್ ಪಾಲಿಸಿ 2025 ರದ್ದುಗೊಳಿಸಿ: ಪ್ರಸ್ತುತ ಜಾರಿಯಲ್ಲಿರುವ ‘ಅಗ್ರಿಗೇಟರ್ ಪಾಲಿಸಿ 2025’ ಚಾಲಕರಿಗೆ ಮಾರಕವಾಗಿದೆ ಎಂದು ಸಂಘಟನೆ ಕಿಡಿಕಾರಿದೆ. ಈ ನೀತಿಯನ್ನು ಕೂಡಲೇ ರದ್ದುಗೊಳಿಸಬೇಕು ಅಥವಾ ಚಾಲಕರಿಗೆ ಪೂರಕವಾಗುವಂತೆ ಅಗತ್ಯ ತಿದ್ದುಪಡಿಗಳನ್ನು ತರಬೇಕು ಎಂಬುದು ಅವರ ಪ್ರಮುಖ ಆಗ್ರಹ.
2)ಕಾನೂನುಬಾಹಿರ ಬೈಕ್-ಟ್ಯಾಕ್ಸಿ ನಿಷೇಧ: ನಗರಗಳಲ್ಲಿ ಅನಧಿಕೃತವಾಗಿ ಮತ್ತು ಯಾವುದೇ ನಿಯಂತ್ರಣವಿಲ್ಲದೆ ಓಡಾಡುತ್ತಿರುವ ಬೈಕ್-ಟ್ಯಾಕ್ಸಿ ಸೇವೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಆಟೋ ಮತ್ತು ಕ್ಯಾಬ್ ಚಾಲಕರ ಆದಾಯಕ್ಕೆ ಭಾರಿ ಹೊಡೆತ ಬೀಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
3)ದರ ನೀತಿಯಲ್ಲಿ ಪಾರದರ್ಶಕತೆ: ಓಲಾ, ಉಬರ್ ಮತ್ತು ರ್ಯಾಪಿಡೋ ಕಂಪನಿಗಳು ಏಕಪಕ್ಷೀಯವಾಗಿ ಮತ್ತು ಮನಬಂದಂತೆ ದರ ನಿಗದಿಪಡಿಸುತ್ತಿವೆ. ಸರ್ಕಾರವೇ ಕನಿಷ್ಠ ಮೂಲ ದರವನ್ನು (Minimum Base Fare) ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಮುಷ್ಕರದ ಪರಿಣಾಮ
ಇಂದು ಮಧ್ಯಾಹ್ನದ ಅವಧಿಯಲ್ಲಿ ಚಾಲಕರು ಆ್ಯಪ್ಗಳನ್ನು ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಕಂಪನಿಗಳ ‘ಸರ್ಜ್ ಪ್ರೈಸಿಂಗ್’ (ಹೆಚ್ಚುವರಿ ದರ) ಮತ್ತು ಕ್ಯಾನ್ಸಲೇಶನ್ ಸಮಸ್ಯೆಗಳಿಂದ ಜನರು ಬೇಸತ್ತಿದ್ದು, ಚಾಲಕರು ಸಹ ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದಿದ್ದಾರೆ.

