ಬೆಂಗಳೂರು: ಬೆಂಗಳೂರಿಗರ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣ ದರ ಮತ್ತೆ ಏರಿಕೆಯಾಗಿದ್ದು, ಬಿಎಂಆರ್ ಸಿಎಲ್ ವಿರುದ್ಧ ಪ್ರಯಾಣಿಕರು ಸಿಡಿದೆದ್ದಿದ್ದಾರೆ. ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ಏರಿಕೆಯಾಗಿತ್ತು. ಇದೀಗ ಮತ್ತೆ ಶೇ.5ರಷ್ಟು ಮೆಟ್ರೋ ಟಿಕೆಟ್ ದರ ಏರಿಸಿ ಬಿಎಂ ಆರ್ ಸಿಇ ಎಲ್ ಆದೇಶ ಹೊರಡಿಸಿದೆ.
ದೇಶದ ಎಲ್ಲಾ ಭಾಗಗಳಿಗಿಂತಲೂ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ದುಬಾರಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋ ಪ್ರಯಾಣದರ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕನ್ನಡಪರ ಸಂಘಟನೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮನೆಯಿಂದ ಸೋಪು, ಶಾಂಪೋ, ಟೂತ್ ಪೇಸ್ಟ್, ಬ್ರೆಶ್, ಅಕ್ಕಿ, ಬೇಳೆ, ಕೋಳಿಸೇರಿದಂತೆ ವಿವಿಧ ಸಾಮಗ್ರಿಗಳೊಂದಿಗೆ ಶಾಂತಿನಗರದ ಬಿಎಂ ಆರ್ ಸಿ ಎಲ್ ಕಚೇರಿಗೆ ಆಗಮಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ನಾವು ನಮ್ಮ ಬಳಿ ಇರುವ ಈ ಎಲ್ಲಾ ವಸ್ತುಗಳನ್ನು ನೀಡುತ್ತೇವೆ. ನಮಗೆ ಮೆಟ್ರೋ ಟಿಕೆಟ್ ನೀಡಿ ಎಂದು ಒತ್ತಾಯಿಸಿದ್ದಾರೆ.
ಮೆಟ್ರೋ ಪ್ರಯಾಣದರ ಏರಿಸಲಾಗಿದೆ. ನಮ್ಮ ಬಳಿ ಹಣವಿಲ್ಲ. ನಮ್ಮ ಬಳಿ ಇರುವ ವಸ್ತುಗಳನ್ನು ತಂದಿದ್ದೇವೆ. ಸೋಪು, ಶಾಂಪೋ, ಪೇಸ್ಟ್, ಬ್ರೆಶ್, ಅಕ್ಕಿ ಇವುಗಳನ್ನು ತೆಗೆದುಕೊಂಡು ನಮಗೆ ಮೆಟ್ರೋ ಟಿಕೆಟ್ ನೀಡಲಿ. ನಾವು ಪ್ರತಿದಿನ ಮೆಟ್ರೋದಲ್ಲಿ ಓಡಾಡುತ್ತೇವೆ. ಮೆಟ್ರೋ ಪ್ರಯಾಣ ದುಬಾರಿಯಾದರೆ ನಾವು ಓಡಾಡುವುದು ಹೇಗೆ? ಬಡ, ಮಧ್ಯಮ ವರ್ಗದ ಜನತೆ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಪ್ರತಿಬಾರಿ ದರ ಏರಿಸುತ್ತಾ ಹೋದರೆ ನಾವು ಟಿಕೆಟ್ ದರ ಪಾವತಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಮೆಟ್ರೋ ಟಿಕೆಟ್ ದರ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

