ನಮ್ಮ ಮೆಟ್ರೋ ಬೆಂಗಳೂರು ನಗರದ ಜನರ ಜೀವನಾಡಿ. ಈಗ ಮೆಟ್ರೋ ದರ ಏರಿಕೆ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದೆ. ದೇಶದಲ್ಲಿಯೇ ನಮ್ಮ ಮೆಟ್ರೋ ದರ ಅತಿ ಹೆಚ್ಚು ಎಂಬುದು ಹಲವರ ವಾದವಾಗಿದೆ. ದರ ಹೆಚ್ಚಳ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ವಾರ್ಷಿಕ ದರ ಪರಿಷ್ಕರಣೆ ಘೋಷಣೆ ಮಾಡಿದೆ. ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಮಾಡಲಾಗಿದೆ. ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನಮ್ಮ ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಮೆಟ್ರೋ ದರವನ್ನು ಶೇ. 71 ರಷ್ಟು ಏರಿಕೆ ಮಾಡಿ, ಇಡೀ ದೇಶದಲ್ಲೇ ಬೆಂಗಳೂರು ಮೆಟ್ರೋವನ್ನು ಅತ್ಯಂತ ದುಬಾರಿ ಮಾಡಿದ್ದು ಇದೇ ರಾಜ್ಯ ಸರ್ಕಾರ ಮತ್ತು BMRCL ಎಂದು ಹೇಳಿದ್ದಾರೆ.
ಈಗ ಫೆಬ್ರವರಿ 9 ರಿಂದ ಮತ್ತೆ ದರ ಏರಿಕೆ ಮಾಡಲು ಹೊರಟಿರುವುದು ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಈ ಅನ್ಯಾಯದ ಬಗ್ಗೆ ವಿವರಿಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಬಾರಿಯೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ನೂತನ ದರ ನಿಗದಿ ಸಮಿತಿ ರಚನೆಗೆ ಒತ್ತಾಯಿಸುವುದು ರಾಜ್ಯದ ಅಧಿಕಾರ. ಜನರ ಹಿತದೃಷ್ಟಿಯಿಂದ ಈ ದರ ಏರಿಕೆಯನ್ನು ಕೂಡಲೇ ಹಿಂಪಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆ ಮಾಡುವುದು ಕೇಂದ್ರ ಸರ್ಕಾರವಲ್ಲ. ನೀವು ಸುಳ್ಳು ಆರೋಪ ಮಾಡಬೇಡಿ. ಕೇಂದ್ರ ಸರ್ಕಾರವೇ ಆಗಿದ್ದರೆ ಈ ಕುರಿತು ಪತ್ರವನ್ನು ಬರೆಯಿರಿ 24 ಗಂಟೆಗಳಲ್ಲಿ ಅದನ್ನು ಕಡಿಮೆ ಮಾಡಿಸಿಕೊಂಡು ಬರುತ್ತೇನೆ ಎಂದು ತೇಜಸ್ವಿ ಸೂರ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ದರ ಎಷ್ಟು ಏರಿಕೆ?: ದರ ನಿಗದಿ ಸಮಿತಿ ಪ್ರಕಾರ ಬಿಎಂಆರ್ಸಿಎಲ್ಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29 ರಿಂದ 10 ರವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು.
ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ಬಿಎಂಆರ್ಸಿಎಲ್ ಮೇಲೆ ಬದ್ಧವಾಗಿರುವ ಸಮಿತಿಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, 9 ಫೆಬ್ರವರಿ 2025ರ ನಂತರ ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಅಲ್ಪ ಹೆಚ್ಚಳವಾಗಿದೆ. 2024-25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು, ಹಣಕಾಸು ವರ್ಷ 2023-24 (31 ಮಾರ್ಚ್ 2024) ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ 10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಹೇಳಿದೆ.

