ಬೆಂಗಳೂರು: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಯೋಜನೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಒದಗಿಬಂದಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಬೆಂಗಳೂರಿನ ಮೆಟ್ರೋ ರೈಲು ಜಾಲವು 100 ಕಿಲೋಮೀಟರ್‌ಗಳ ಗಡಿ ದಾಟಲಿದೆ. ಈ ಮಹತ್ವದ ವಿಚಾರವನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಿಂಕ್ ಲೈನ್ ಕಾಮಗಾರಿಯನ್ನು ನಿಗದಿತ ಹಾದಿಯಲ್ಲಿ ಮುಂದುವರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಲವು ಅಡೆತಡೆಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ. ಕಾಮಗಾರಿಗೆ ವೇಗ ನೀಡಲು ನಡೆಸಿದ ನಿರಂತರ ಪ್ರಯತ್ನಗಳು ಈಗ ಫಲ ನೀಡಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಪಿಂಕ್ ಲೈನ್‌ಗೆ ಚಾಲನೆ ನೀಡಲಿರುವುದು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ. ಮೆಟ್ರೋ ಜಾಲ ವಿಸ್ತರಣೆಯಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
ಪಿಂಕ್ ಲೈನ್ ನ ಮೊದಲ ಹಂತಕ್ಕೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು ನಗರದ ದಕ್ಷಿಣ ಭಾಗದ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಪಿಂಕ್ ಲೈನ್ ನ ಮೊದಲ ಹಂತವು 7.5 ಕಿಲೋಮೀಟರ್ ಉದ್ದ ಹೊಂದಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಈ ಎತ್ತರಿಸಿದ ಮೆಟ್ರೋ ಮಾರ್ಗ ನಿರ್ಮಾಣಗೊಂಡಿದೆ.
ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳಿವೆ. ಅವುಗಳೆಂದರೆ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ(IIM ಬೆಂಗಳೂರು), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ, ಈ ಮಾರ್ಗದ ಪ್ರಮುಖ ವಿಶೇಷವೆಂದರೆ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬಿಳೇಕಹಳ್ಳಿ, ಜೆ.ಪಿ. ನಗರ ಸೇರಿದಂತೆ ದಕ್ಷಿಣ ಬೆಂಗಳೂರಿನ ಹಲವು ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮೆಟ್ರೋ ಜಾಲ 100 ಕಿ.ಮೀ. ಗಡಿ ದಾಟಲಿದೆ
ಪ್ರಸ್ತುತ ಬೆಂಗಳೂರಿನಲ್ಲಿ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳು ಸೇರಿದಂತೆ ಸುಮಾರು 96.1 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಜಾಲ ಕಾರ್ಯನಿರ್ವಹಿಸುತ್ತಿದೆ. ಇದೀಗ ಪಿಂಕ್ ಲೈನ್‌ನ 7.5 ಕಿಲೋಮೀಟರ್ ಮಾರ್ಗ ಕಾರ್ಯಾಚರಣೆಗೆ ಸೇರ್ಪಡೆಯಾದ ನಂತರ ಒಟ್ಟು ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲದ ಉದ್ದ ಸುಮಾರು 103.6 ಕಿಲೋಮೀಟರ್‌ಗೆ ಏರಿಕೆಯಾಗಲಿದೆ.
ಇದರೊಂದಿಗೆ ಬೆಂಗಳೂರು ನಗರವು 100 ಕಿಲೋಮೀಟರ್‌ಗಿಂತ ಹೆಚ್ಚು ಉದ್ದದ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲ ಹೊಂದಿರುವ ನಗರಗಳ ಸಾಲಿಗೆ ಸೇರ್ಪಡೆಯಾಗಲಿದೆ.
21.25 ಕಿ.ಮೀ. ಉದ್ದದ ಸಂಪೂರ್ಣ ಪಿಂಕ್ ಲೈನ್ ಯೋಜನೆ
ನಮ್ಮ ಮೆಟ್ರೋದ ಎರಡನೇ ಹಂತದ ಪ್ರಮುಖ ಯೋಜನೆಗಳಲ್ಲಿ ಪಿಂಕ್ ಲೈನ್ ಕೂಡ ಒಂದಾಗಿದೆ. ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರ ಬೆಂಗಳೂರಿನ ನಾಗವಾರದವರೆಗೆ ಒಟ್ಟು 21.25 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಈ ಸಂಪೂರ್ಣ ಮಾರ್ಗದಲ್ಲಿ 18 ಮೆಟ್ರೋ ನಿಲ್ದಾಣಗಳಿರಲಿವೆ. ಇದರಲ್ಲಿ ಸುಮಾರು 7.5 ಕಿಲೋಮೀಟರ್ ಎತ್ತರಿಸಿದ ಮಾರ್ಗವಾಗಿದ್ದರೆ, ಉಳಿದ 13.76 ಕಿಲೋಮೀಟರ್ ಸುರಂಗ ಮಾರ್ಗವಾಗಿರಲಿದೆ.
ಸುರಂಗ ಮಾರ್ಗವು ಡೇರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್ ಸೇರಿದಂತೆ ಪ್ರಮುಖ ಪ್ರದೇಶಗಳ ಮೂಲಕ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ.
ಸದ್ಯ ಉದ್ಘಾಟನೆಗೆ ಸಿದ್ಧವಾಗಿರುವುದು ಮೊದಲ ಹಂತದ ಎತ್ತರಿಸಿದ ಮಾರ್ಗ ಮಾತ್ರ. ಉಳಿದ ಸುರಂಗ ಮಾರ್ಗದ ಕಾಮಗಾರಿಗಳು, ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇತರ ತಾಂತ್ರಿಕ ಕೆಲಸಗಳು ಮುಂದುವರಿದಿವೆ. ಸಂಪೂರ್ಣ ಪಿಂಕ್ ಲೈನ್ ಮಾರ್ಗವನ್ನು 2027ರಲ್ಲಿ ಕಾರ್ಯಾಚರಣೆಗೆ ತರುವ ಗುರಿಯನ್ನು ಹೊಂದಲಾಗಿದೆ.
2027ರ ವೇಳೆಗೆ 170 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಯ ಗುರಿ
ಬೆಂಗಳೂರು ನಗರದ ಜನಸಂಖ್ಯೆ ಹೆಚ್ಚಳದೊಂದಿಗೆ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಟ್ರೋ ರೈಲು ಜಾಲವನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ.
2027ರ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲವನ್ನು 170 ಕಿಲೋಮೀಟರ್‌ಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಗುರಿ ಸಾಧಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

