ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾನು ಭಾಗಿಯಿಲ್ಲ. ಒಂದೇ ಒಂದು ರೂಪಾಯಿ ಅಕ್ರಮವೆಸಗಿಲ್ಲ ಎಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ವಿಪಕ್ಷಗಳು ಸದನ ಹಾಳು ಮಾಡಿದ ಸಂವಿಧಾನ ವಿರೋಧಿಗಳು. ವಿಪಕ್ಷಗಳು ಈಗಲೂ ಮನುಸ್ಮೃತಿ ಜಾರಿಗೆ ಯತ್ನಿಸುತ್ತಿದ್ದಾರೆ. ಶೂದ್ರರು, ದಲಿತರು,ಮಹಿಳೆಯರು, ಯುವಕರನ್ನು ಸ್ವತಂತ್ರವಾಗಿ ಬದುಕಲು ಬಿಡಬಾರದು ಎಂಬ ಮನಸ್ಥಿತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ದಲಿತರು, ಆದಿವಾಸಿಗಳು ಮೇಲೆ ಬರಬಾರದು, ಆದಿವಾಸಿಗಳು ಮಂತ್ರಿಯಾಗಬಾರದು ಎಂದು ಕುತಂತ್ರದಿಂದ ಸುಳ್ಳು ಆರೋಪ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ವಿಪಕ್ಷಗಳ ಕುತಂತ್ರ ರಾಜಕಾರಣದಿಂದ ರಾಜ್ಯದ ಮುಗ್ದ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ನಾವು ಹಲವು ಬಾರಿ ವಿಪಕ್ಷ ನಾಯಕರಿಗೆ ಮನವಿ ಮಾಡಿದೆವು. ನೋಟಿಸ್ ಕೊಡಿ ಚರ್ಚೆಗೆ ಬನ್ನಿ ಎಂದು ಕೇಳಿದೆವು. ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ವಿಪಕ್ಷಗಳಿಗೆ ಸದನದಲ್ಲಿ ಚರ್ಚಿಸಲು ಸಾಕಷ್ಟು ಅವಕಾಶಗಳಿದ್ದವು. ಇಂದು ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕಾವೇರಿ ನೀರಿನ ಸಮಸ್ಯೆ ಇದೆ, ಕುಡಿಯುವ ನೀರಿನ ಸಮಸ್ಯೆಯಿದೆ. ಕೆಪಿಎಸ್ಸಿ ಹಗರಣವಾಗಿದೆ ಇದ್ಯಾವುದರ ಬಗ್ಗೆ ಚರ್ಚಿಸಲು ಅವರು ಅವಕಾಶಕೊಡುತ್ತಿಲ್ಲ. ವಿಪಕ್ಷದ ಯಾವ ಶಾಸಕರಿಗೂ ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಯಾವುದೇ ಕಾಳಜಿ ಇಲ್ಲ, ಕೇವಲ ರಾಜಕೀಯ ಮಾಡುತ್ತಿದ್ದಾರೆ. ಇಲ್ಲದಿರುವ ಆರೋಪ ಮಾಡಿ ಹಗರಣವಾಗಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಒಂದು ಸುಳ್ಳು ಇಟ್ಟುಕೊಂಡು ಮುಗ್ಧ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ವಿಪಕ್ಷಗಳಿಗೆ, ಇಂತಹ ಮನಸ್ಥಿತಿಯವರಿಗೆ ಒಳ್ಳೆಯದಾಗಲ್ಲ. ಆಧಾರವಿಲ್ಲದ ಆರೋಪ ಮಾಡುತ್ತಾ ಅನವಶ್ಯಕವಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ನಾನು ಈ ಹಿಂದೆ ಮನುವಾದಿಗಳ ಕುತಂತ್ರದಿಂದ ಜೈಲಿಗೆ ಹೋದೆ. ಬಳಿಕ ಜಾಮೀನು ಪಡೆದು ಹೊರಬಂದೆ. ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂದು ೨೦೨೪ರಲ್ಲಿ ರಾಜೀನಾಮೆ ನೀಡಿದೆ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ. ನನ್ನಿಂದ ಯಾವುದೇ ಹಗರಣವಾಗಿಲ್ಲ ವಾಲ್ಮೀಕಿ ನಿಗಮದ ಹಣವನ್ನು ನಾನು ಒಂದು ರೂಪಾಯಿ ದುರಪಯೊಗ ಮಾಡಿಲ್ಲ. ನನ್ನಿಂದ ಯಾವ ಹಣ ವರ್ಗವಣೆಯಾಗಿದೆ? ಎಲ್ಲಿ ತಪ್ಪಾಗಿದೆ ಸಾಕ್ಷಿ ತೋರಿಸಲಿ. ಯಾವ ತಪ್ಪು ಮಾಡಿಲ್ಲದ ನನಗೆ ಇದು ಯಾವ ಶಿಕ್ಷೆ ಸ್ವಾಮಿ? ನಾನು ಆದಿವಾಸಿ, ದಲಿತ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡುತ್ತಿರುವ ಬಿಜೆಪಿಯವರಿಗೆ ಒಳ್ಳೆಯದಾಗಲ್ಲ. ನಿಮಗೊಂದು ನ್ಯಾಯ ನನಗೊಂದು ನ್ಯಾಯವೇ? ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂಬುದನ್ನು ಜಗಜ್ಜಾಹೀರು ಮಾಡುತ್ತೇನೆ. ಈ ರಾಜ್ಯದ ಜನತೆ, ದಲಿತರು ಎಲ್ಲವನ್ನು ನೋಡುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಒಂದು ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ನಿಜಮಾಡಲು ಹೊರಟಿದ್ದೀರಾ ಮನುವಾದಿಗಳೇ. ನಾನು ತಪ್ಪು ಮಾಡಿಲ್ಲ. ಹಗರಣದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ನಾನು ಸಾಬೀತುಮಾಡಿ ತೋರಿಸುತ್ತೇನೆ ಇದು ನನ್ನ ಸವಾಲು ಎಂದು ಹೇಳಿದರು.
ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದು, ಡಿ.ಕೆ.ಶಿವಕುಮಾರ್ ಅವರ ಸರ್ಕಾರಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

