HomeKarnatakaನಾಗಮಂಗಲ ಗಲಭೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರಕ್ಕೆ ವಿಜಯೇಂದ್ರ ಆಗ್ರಹ

ನಾಗಮಂಗಲ ಗಲಭೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರಕ್ಕೆ ವಿಜಯೇಂದ್ರ ಆಗ್ರಹ

ಬೆಂಗಳೂರು: ಈ ಭ್ರಷ್ಟ ಸರಕಾರ ಕೋಮುಗಲಭೆಗಳಿಗೆ ಕುಮ್ಮಕ್ಕು ಕೊಡುವುದರ ಮೂಲಕ ಗಲಭೆಕೋರರ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಗಲಭೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ನಾಗಮಂಗಲದ ಗಣೇಶೋತ್ಸವದ ಸಂದರ್ಭದಲ್ಲಿ ನಿನ್ನೆ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು, ಅಂಗಡಿಗಳನ್ನು ಸುಟ್ಟಿರುವ ಕುರಿತಂತೆ ಮಾಹಿತಿ ಪಡೆದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಸುಟ್ಟು ಹೋದ ಅಂಗಡಿಗಳ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋದ ಕುರಿತು ಜನರು ಮಾತನಾಡುತ್ತಿದ್ದಾರೆ. ನಾಗಮಂಗಲದಲ್ಲಿ ಗಣೇಶನ ಮೂರ್ತಿ ಶಾಂತಿಯುತ ಮೆರವಣಿಗೆ ಸಂದರ್ಭದಲ್ಲಿ ದೇಶದ್ರೋಹಿಗಳಿಂದ ಪೂರ್ವನಿಯೋಜಿತ ಕೃತ್ಯ ನಡೆದಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ತಳವಾರಿನೊಂದಿಗೆ ಬೀದಿಗೆ ಬಂದು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದೆ. ವಾಹನಗಳ ಶೋರೂಂ, ಬಟ್ಟೆ ಅಂಗಡಿ ಸುಡಲಾಗಿದೆ. ಇದೆಲ್ಲವೂ ಪೂರ್ವಯೋಜಿತ ದುಷ್ಕೃತ್ಯ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಾದರೂ ಸಹ ಪೊಲೀಸರು ಕೈಕಟ್ಟಿಕೊಂಡು ಎಲ್ಲವನ್ನೂ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು ಎಂದರೆ, ಆಡಳಿತ ಪಕ್ಷದ ಒತ್ತಡವೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಹಿಂದೆ ಕೆರೆಗೋಡಿನಲ್ಲಿ ಹನುಮಧ್ವಜವನ್ನು ಇಳಿಸುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯನವರ ನೇತೃತ್ವದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ನಡವಳಿಕೆ ಪರಿಣಾಮವಾಗಿ ದೇಶದ್ರೋಹಿಗಳು ಅಟ್ಟಹಾಸದಿಂದ ಮೆರೆಯುವಂತಾಗಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ನಿಮ್ಮ ‘420’ ರಾಜಕಾರಣವನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು. ಬಂಧಿತ ಹಿಂದೂಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನಷ್ಟಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಪೆಟ್ರೋಲ್ ಬಾಂಬ್ ಎಸೆದು ದುಷ್ಕೃತ್ಯ: ಆರ್. ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಪೊಲೀಸರ ಎದುರೇ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮತಾಂಧ ಮುಸ್ಲಿಮರು ಕಾನೂನನ್ನು ಕೈಗೆ ತೆಗೆದುಕೊಂಡು ಅಟ್ಟಹಾಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಕಳೆದ ಬಾರಿಯೂ ಇಲ್ಲಿನ ಮಸೀದಿಯಿಂದ ಕಲ್ಲುಗಳನ್ನು ತೂರಲಾಗಿತ್ತು. ಇದೆಲ್ಲವೂ ಗೊತ್ತಿದ್ದರೂ ಭದ್ರತೆ ಕೊಡಬೇಕೆಂಬ ಸಾಮಾನ್ಯ ಜ್ಞಾನವೇ ಇಲ್ಲದ ಆಡಳಿತ ರಾಜ್ಯದ್ದು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರೌಡಿಗಳು, ಭಯೋತ್ಪಾದಕರಿಗೆ ಇದು ನಮ್ಮ ಸರ್ಕಾರ ಅನಿಸುತ್ತಿದೆ ಎಂದು ಟೀಕಿಸಿದರು.

ಪೆಟ್ರೋಲ್ ಬಾಂಬ್ ಎಸೆಯುವುದು ಸಂಘಟನೆಯೇ? ಸಿ.ಟಿ. ರವಿ ಆಕ್ರೋಶ

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಇದೆಲ್ಲವೂ ಪೂರ್ವಯೋಜಿತ. ಗೃಹಸಚಿವರು ಸಂಘಟನೆ ಎಂದು ಹೇಳುವುದಾದರೆ ಪೆಟ್ರೋಲ್ ಬಾಂಬ್ ಹಾಕುವುದು ಸಂಘಟನೆಯೇ? ಕೋಟ್ಯಂತರ ರೂಪಾಯಿಯ ಅಂಗಡಿಗಳನ್ನು ಸುಟ್ಟು ಹಾಕುವುದು ಸಂಘಟನೆಯೇ ಎಂದು ಪ್ರಶ್ನಿಸಿದರು. ಯಾವ ಆಧಾರದಲ್ಲಿ ಇದನ್ನು ಸಂಘಟನೆ ಎನ್ನುತ್ತೀರಿ ಎಂದು ಕೇಳಿದರು.

ಕಲ್ಲು ತೂರಿದವರು, ಮೆರವಣಿಗೆ ತಡೆದವರು, ಬೆಂಕಿ ಹಾಕಿದವರ ಮೇಲಷ್ಟೇ ಕೇಸು ಹಾಕಿ ಬಂಧಿಸಬೇಕು. ಗಣೇಶೋತ್ಸವದ ಸಂಘಟಕರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆದು ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಮಾಜಿ ಸಚಿವ ನಾರಾಯಣ ಗೌಡ, ಮಾಜಿ ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ, ರಾಜ್ಯ ಕಾರ್ಯದರ್ಶಿ ಶರಣ್ ತಳ್ಳಿಕೆರೆ ಮೊದಲಾದವರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular