ಮೈಸೂರು: ಪೊಲೀಸರು ಎಂದು ಹೇಳಿಕೊಂಡು ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು, ಅಲ್ಲಿನ ಮಹಿಳೆಯರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಕಸಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಶಾರದಾದೇವಿನಗರದ ಶಾರದಾ ಅಪಾರ್ಟ್‌ಮೆಂಟ್ ನಿವಾಸಿ ಸವಿತ ಎಂಬವರ ಮನೆಯಲ್ಲಿ ಆಗಸ್ಟ್ 25ರಂದು ಈ ಘಟನೆ ನಡೆದಿದೆ. ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸವಿತಾ ಅವರು ಅಂದು ಮಧ್ಯಾಹ್ನ ತನ್ನ ಸ್ನೇಹಿತೆಯರಾದ ಕೆಂಡಮ್ಮ ಹಾಗೂ ಸರಸ್ವತಿ ಎಂಬವರೊಂದಿಗೆ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದರು.
ಈ ವೇಳೆ ಮುಖಕ್ಕೆ ಮಾಸ್ ತೊಟ್ಟ ಐವರು ಏಕಾಏಕಿ ಮನೆ ಒಳಗೆ ಪ್ರವೇಶಿಸಿದ್ದಾರೆ. ನಾವು ಸರಸ್ವತಿಪುರಂ ಠಾಣಾ ಪೊಲೀಸರು ಎಂದು ಹೇಳಿಕೊಂಡ ಅವರು ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಬೆದರಿಸಿದ್ದಾರೆ.
ನೀವು 2 ಲಕ್ಷ ರೂ. ನೀಡಿದಲ್ಲಿ ನಾವು ಹೋಗುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಬಳಿ ಇಷ್ಟೊಂದು ಹಣ ಎಲ್ಲಿದೆ ಎಂದು ಸವಿತ ಹೇಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮೂವರು ಮಹಿಳೆಯರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

