ಮೈಸೂರು: ಕರ್ಕಶವಾಗಿ ಶಬ್ಧಗಳನ್ನು ಮಾಡುತ್ತಾ ಕಿವಿಗಡಚಿಕ್ಕುವ ರೀತಿಯಲ್ಲಿ ವಾಹನಗಳನ್ನು ಓಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಪುಂದರ ವಿರುದ್ಧ ಮೈಸೂರು ಸಂಚಾರಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳ ವಿರುದ್ಧ ವಿನೂತನ ರೀತಿಯಲ್ಲಿ ಸಮರ ಸಾರಿದ್ದಾರೆ.
ಮೈಸೂರು ನಗರ ಸಂಚಾರಿ ಪೊಲೀಸರು ದೋಷಪೂರಿತ ಬೈಕ್ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಅವುಗಳನ್ನು ನಾಶ ಮಾಡಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಮತ್ತು ಅತಿಯಾದ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಅವುಗಳ ಮೇಲೆ ರೋಡ್ ರೋಲರ್ ಗಳನ್ನು ಹತ್ತಿಸಿ ವಿನೂತನ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ, ಕರ್ಕಶವಾಗಿ ಶಬ್ಧ ಮಾಡುತ್ತಾ ಜನರಿಗೆ ತೊಂದರೆ ನೀಡುತ್ತಿದ್ದ ಒಟ್ಟು 378 ದ್ವಿಚಕ್ರ ವಾಹನಗಳನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದವು. ಈ ಬೈಕ್‌ಗಳಲ್ಲಿ ಅಳವಡಿಸಲಾಗಿದ್ದ ದೋಷಪೂರಿತ ಸೈಲೆನ್ಸರ್‌ಗಳು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದವು. ಈ ಎಲ್ಲಾ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ರೋಡ್ ರೋಲರ್ ಹತ್ತಿಸುವ ಮೂಲಕ ಸಂಪೂರ್ಣವಾಗಿ ನಾಶಪಡಿಸಿದ್ದಾರೆ.

