ಮೈಸೂರು: ಮೈಸೂರು ಅರಮನೆ ಬಳಿ ಬಲೂನು ಮಾರಾಟಗಾರ ಬಳಸುತ್ತಿದ್ದ ಹೀಲಿಯಂ ಸಿಲಿಂಡರ್ ಸ್ಫೋಟ ಸಭವಿಸಿ ಮೂವರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಮೈಸೂರು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಹೀಲಿಯಂ ಬಲೂನು ಮಾರಾಟ ಸಪೂರ್ಣ ನಿಷೇಧಿಸಲಾಗಿದೆ.
ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ ತುಂಬುವುದು, ಮಾರಾಟ ಮಾಡುವುದು, ಸಂಗ್ರಹ–ಸಾಗಣೆ ನಡೆಸುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಬಿಎನ್ ಎಸ್-2023 ಸೆಕ್ಷನ್ 152 ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಮುಖ ಅಂಶಗಳು:
- ಹಬ್ಬ–ಜಾತ್ರೆಗಳು, ಪ್ರವಾಸಿ ಕೇಂದ್ರಗಳು, ಜನಸಂದಣಿ ಪ್ರದೇಶಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಹೀಲಿಯಂ ಬಳಸಿ ಬಲೂನ್ ತುಂಬುವುದು/ಮಾರಾಟ ಸಂಪೂರ್ಣ ನಿಷೇಧ.
- ಪ್ರಮಾಣಿತ ಸುರಕ್ಷತಾ ವಿಧಾನಗಳಿಲ್ಲದೆ ಹೀಲಿಯಂ ಸಿಲಿಂಡರ್ ಸಂಗ್ರಹ–ಸಾಗಣೆ–ಬಳಕೆ–ಮಾರಾಟ ಮಾಡಿದರೆ ಕಾನೂನು ಕ್ರಮ.
- ವೈದ್ಯಕೀಯ ಹಾಗೂ ವೈಜ್ಞಾನಿಕ ಬಳಕೆಗಳಿಗೆ ನಿರ್ಬಂಧ ಇಲ್ಲ.
- ಸಭೆ–ಸಮಾರಂಭಗಳಲ್ಲಿ ಮುಂಚಿತ ಅನುಮತಿ ಪಡೆದು ಮಾತ್ರ ಹೀಲಿಯಂ ಬಳಕೆ ಸಾಧ್ಯ.
- ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲು ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ.
ಹೀಲಿಯಂ ದಹನಶೀಲವಲ್ಲ. ಆದರೆ ಅತ್ಯಧಿಕ ಒತ್ತಡದ ಸಿಲಿಂಡರ್‌ಗಳು, ಕಳಪೆ ವಾಲ್ವ್‌ಗಳು, ಅಪ್ರಮಾಣಿತ ಸಂಗ್ರಹ–ಬಳಕೆ ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಬಹುದು. ಜನಸಂದಣಿ ಪ್ರದೇಶಗಳಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದರೆ ಜೀವಾಪಾಯವಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಹೀಲಿಯಂ ಅಥವಾ ಅನಿಲ ಬಳಕೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ. ಆಯೋಜಕರು ಅನುಮತಿ ಸುರಕ್ಷತಾ ಪ್ರಮಾಣಪತ್ರ ಇಲ್ಲದೆ ಹೀಲಿಯಂ ಬಳಕೆ ಮಾಡಬಾರದು. ಪೋಷಕರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಹಿಲಿಯಂ ಬಲೂನ್ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಬಹುತೇಕ ಬಲೂನ್ ಮಾರಾಟಗಾರರು ‘ಹೀಲಿಯಂ’ ಹೆಸರಿನಲ್ಲಿ ಅಪಾಯಕಾರಿ ಅನಿಲ ಬಳಸುತ್ತಾರೆ. ಎಷ್ಟು ಪ್ರಮಾಣದಲ್ಲಿ, ಹೇಗೆ ಬಳಸಬೇಕು ಅನ್ನೋ ತಿಳುವಳಿಕೆ ಅವರಿಗೆ ಇಲ್ಲ. ಅದರಿಂದಲೇ ಜನರಿಗೆ ಅಪಾಯ. ಹೀಗಾಗಿ ಹೀಲಿಯಂ ಬಲೂನ್ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

