ಮೈಸೂರು: ಮೈಸೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಿ, ಸುಮಾರು 30 ಜನ ಪೆಡ್ಲರ್ಸ್ಅನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಇದರ ಜೊತೆಗೆ ಕೆಲ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಸಹ ನಡಸಲಾಗಿದೆ. ಇಲ್ಲಿಯವರೆಗೆ ಸುಮಾರು 30 ಜನ ಪೆಡ್ಲರ್ಸ್ಅನ್ನು ಗಡಿಪಾರು ಮಾಡಿದ್ದೇವೆ. ಇದರ ಜೊತೆಗೆ ಎನ್ಡಿಪಿಎಸ್ ಕಾಯ್ದೆ ಅಡಿ ಓರ್ವ ಹಳೆಯ ಪೆಡ್ಲರ್ಅನ್ನು ಬಳ್ಳಾರಿ ಜೈಲಿಗೆ ಕಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ನಾವು ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದರೂ ಸಹ, ತಪ್ಪಿತಸ್ಥರು ಬೇಲ್ ತೆಗೆದುಕೊಂಡು ಆಚೆ ಬಂದು ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಾರೆ. ಅಂತವರನ್ನು ಪುನಃ ವಶಕ್ಕೆ ಪಡೆದು ಅವರ ಮೇಲೆ ಕೇಸ್ ಹಾಕುತ್ತೇವೆ. ಅದರಲ್ಲಿ ಮೈಸೂರು ಸಿಟಿಯಲ್ಲಿರುವ ಇರ್ಫಾನ್ ಪಾಷಾ ಎಂಬುವರ ಮೇಲೆ 9 ಕೇಸ್ಗಳು ಇದ್ದರೂ ಸಹ ಈತ ಮಾದಕ ದ್ರವ್ಯಗಳನ್ನು ಮಾರಾಟವನ್ನು ಮುಂದುವರೆಸಿದ್ದು, ಈತನಿಂದ 28 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದೇವೆ. ಈತನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ರೌಡಿ ಶೀಟರ್ ಕೇಸ್ ಹಾಕಿ, ಈತನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಾಮಾನ್ಯವಾಗಿ ಮೊಬೈಲ್ ಕಳೆದು ಹೋದರೆ ಮೊದಲು ಐಎಂಇಐ ನಿಂದ ಬ್ಲಾಕ್ ಮಾಡಿದರೆ ಯಾವುದೇ ಸಿಮ್ ಹಾಕಲು ಸಾಧ್ಯವಿಲ್ಲ. ಅದರಲ್ಲಿ ಇ-ಲಾಸ್ಟ್ ಎಂಬ ಆ್ಯಪ್ ಇದ್ದು, ಅದನ್ನು ಬಳಸಿಕೊಳ್ಳಿ ಮತ್ತು ಸಿಐಆರ್ ಪೋರ್ಟಲ್ ಗೆ ನೋಂದಣಿ ಮಾಡಿಕೊಂಡರೆ ನಿಮ್ಮ ಕಳೆದುಹೋದ ಮೊಬೈಲ್ ಅನ್ನು ಹುಡುಕಲು ಸಹಾಯವಾಗುತ್ತದೆ ಎಂದು ಕಮಿಷನರ್ ವಿವರಿಸಿದರು.
ಜೊತೆಗೆ ಕಳೆದ 3 ತಿಂಗಳಿನಲ್ಲಿ ಕಳ್ಳತನವಾದ 144 ಮೊಬೈಲ್ಗಳನ್ನು ಪತ್ತೆ ಮಾಡಿದ್ದು, ಒಟ್ಟಾರೆ 220 ಮೊಬೈಲ್ಗಳನ್ನು ಟ್ರೇಸ್ ಮಾಡಿ 197 ಜನರಿಗೆ ವಾಪಸ್ ಕೊಟ್ಟಿದ್ದೇವೆ. ಆದ್ದರಿಂದ ಸಾರ್ವಜನಿಕರು ಸಿಐಆರ್ ಪೋರ್ಟಲ್ ಗೆ ನೋಂದಣಿ ಮಾಡಿಕೊಳ್ಳಿ ಎಂದು ನಗರ ಪೊಲೀಸ್ ಕಮಿಷನರ್ ಸಲಹೆ ನೀಡಿದರು.

