ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಯುವ ಸಮುದಾಯದ ಆರೋಗ್ಯದ ಬಗ್ಗೆ ಈಗ ಗಂಭೀರ ಆತಂಕವೊಂದು ವ್ಯಕ್ತವಾಗಿದೆ. ನಗರದ ಖ್ಯಾತ ಹೃದಯರೋಗ ತಜ್ಞರೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವಜನತೆಯಲ್ಲಿ ಅಪಾಯಕಾರಿ ಮಟ್ಟದ ‘ಕೊಲೆಸ್ಟ್ರಾಲ್’ (High Cholesterol) ಪತ್ತೆಯಾಗುತ್ತಿರುವ ಬಗ್ಗೆ ಎಚ್ಚರಿಸಿದ್ದಾರೆ.
ಹಿಂದೆಲ್ಲಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ 20 ಮತ್ತು 30ರ ವಯೋಮಾನದವರಲ್ಲಿ ದಿನನಿತ್ಯ ಕಂಡುಬರುತ್ತಿರುವುದು ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದೆ.
ವೈದ್ಯರು ಹೇಳಿದ್ದೇನು?
ಬೆಂಗಳೂರು ಮೂಲದ ಕಾರ್ಡಿಯಾಲಜಿಸ್ಟ್ ಒಬ್ಬರು ಎಕ್ಸ್ (X) ನಲ್ಲಿ ಈ ಬಗ್ಗೆ ಆತಂಕ ಹಂಚಿಕೊಂಡಿದ್ದಾರೆ. ಅವರ ಬಳಿಗೆ ತಪಾಸಣೆಗೆ ಬರುತ್ತಿರುವ ಯುವ ನಗರವಾಸಿಗಳ ಪೈಕಿ ಹೆಚ್ಚಿನವರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಸಾಮಾನ್ಯಕ್ಕಿಂತ ಅತಿ ಹೆಚ್ಚಾಗಿರುವುದು ಕಂಡುಬಂದಿದೆ. ಇದು ಕೇವಲ ಕಳವಳಕಾರಿ ವಿಷಯವಲ್ಲ, ಇದೊಂದು ಅಪಾಯಕಾರಿ ಬದಲಾವಣೆ ಎಂದು ಅವರು ಬಣ್ಣಿಸಿದ್ದಾರೆ.
ಏನಿದು ಲಿಪಿಡ್ ಪ್ರೊಫೈಲ್ ಸವಾಲು?
ವೈದ್ಯರ ಪ್ರಕಾರ, ಯುವ ರೋಗಿಗಳ ರಕ್ತ ಪರೀಕ್ಷೆ ಮಾಡಿದಾಗ ಎಲ್‌ಡಿಎಲ್ (LDL – ಕೆಟ್ಟ ಕೊಲೆಸ್ಟ್ರಾಲ್) ಮಟ್ಟವು ವಿಪರೀತವಾಗಿರುವುದು ಕಂಡುಬರುತ್ತಿದೆ. ಇದು ನೇರವಾಗಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಅಪಾಯವನ್ನು ಹೆಚ್ಚಿಸುತ್ತದೆ. ಮೊದಲೆಲ್ಲಾ ವರ್ಷಕ್ಕೆ ಒಂದೆರಡು ಇಂತಹ ಪ್ರಕರಣಗಳು ಬರುತ್ತಿದ್ದರೆ, ಈಗ ದಿನನಿತ್ಯ ಇಂತಹ ಕೇಸ್‌ಗಳನ್ನು ನೋಡುತ್ತಿದ್ದೇವೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಪಾಯಕ್ಕೆ ಪ್ರಮುಖ ಕಾರಣಗಳೇನು?
ಜೀವನಶೈಲಿ ಬದಲಾವಣೆ: ಐಟಿ ಸಿಟಿಯ ಒತ್ತಡದ ಬದುಕು ಮತ್ತು ಹಗಲು-ರಾತ್ರಿ ಕೆಲಸದ ನಡುವೆ ದೈಹಿಕ ಶ್ರಮ ಮಾಯವಾಗಿದೆ.
ಆಹಾರ ಪದ್ಧತಿ: ಅತಿಯಾದ ಜಂಕ್ ಫುಡ್ ಸೇವನೆ ಸಂಸ್ಕರಿಸಿದ ಎಣ್ಣೆಯ ಬಳಕೆ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು.
ಒತ್ತಡ ಮತ್ತು ನಿದ್ರಾಹೀನತೆ: ವೃತ್ತಿ ಜೀವನದ ಒತ್ತಡದಿಂದಾಗಿ ಸರಿಯಾದ ನಿದ್ರೆ ಇಲ್ಲದಿರುವುದು ಕೂಡ ಹಾರ್ಟ್ ಸಮಸ್ಯೆಗೆ ನಾಂದಿ ಹಾಡುತ್ತಿದೆ.
ನಿಮಗೆ 25 ಅಥವಾ 30 ವರ್ಷ ಎಂದ ತಕ್ಷಣ ನೀವು ಸಂಪೂರ್ಣ ಆರೋಗ್ಯವಾಗಿದ್ದೀರಿ ಎಂದು ಭಾವಿಸಬೇಡಿ. ಒಮ್ಮೆ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆರಂಭಿಕ ಹಂತದಲ್ಲೇ ಕೊಲೆಸ್ಟ್ರಾಲ್ ಪತ್ತೆಯಾದರೆ ಆಹಾರ ಮತ್ತು ಜೀವನಶೈಲಿಯ ಮೂಲಕ ಅದನ್ನು ಸುಲಭವಾಗಿ ನಿಯಂತ್ರಿಸಬಹುದು

