ಚೆನ್ನೈ : ತಮಿಳುನಾಡಿನ ಸರ್ಕಾರಿ ಹಾಸ್ಟೆಲ್ಗಳ ಆಹಾರ ಮೆನುವಿನಲ್ಲಿ ಬೀಫ್ (ಗೋಮಾಂಸ) ಸೇರಿಸುವಂತೆ ಕೆಲವು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ ಎಂದು ರಾಜ್ಯದ ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಹೌದು.ತಮಿಳುನಾಡಿನ ಸರ್ಕಾರಿ ಹಾಸ್ಟೆಲ್ಗಳ ಆಹಾರ ಮೆನುವಿನಲ್ಲಿ ಗೋಮಾಂಸ ಸೇರಿಸುವಂತೆ ಕೆಲವು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಮಟನ್ ಬೆಲೆ ದುಬಾರಿಯಾಗಿರುವುದರಿಂದ ಕಡಿಮೆ ವೆಚ್ಚದ ಪರ್ಯಾಯವಾಗಿ ಗೋಮಾಂಸ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಈ ಕುರಿತು ಭಿನ್ನಾಭಿಪ್ರಾಯ ಇರುವುದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ. ಏತನ್ಮಧ್ಯೆ, ಗೋಮಾಂಸ ಸೇರ್ಪಡೆ ಪ್ರಸ್ತಾವಕ್ಕೆ ವಿರೋಧವೂ ವ್ಯಕ್ತವಾಗಿದೆ.
ಸೈದಾಪೇಟೆಯ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್ನಲ್ಲಿ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವನ್ನಿ ಅರಸು, ವಿದ್ಯಾರ್ಥಿಗಳ ಅಭಿಪ್ರಾಯದ ಆಧಾರದ ಮೇಲೆ ಹಾಸ್ಟೆಲ್ಗಳ ಮೆನುವಿನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಹಾಸ್ಟೆಲ್ಗಳ ಆಹಾರ ಮೆನುವಿನಲ್ಲಿ ಮಾಂಸಾಹಾರಿ ಆಹಾರ ಮತ್ತು ವಾರಕ್ಕೊಮ್ಮೆ ಬಿರಿಯಾನಿ ಸೇರಿಸಲಾಗಿದೆ. ಪ್ರಸ್ತುತ ಮಟನ್ ಮತ್ತು ಚಿಕನ್ ನೀಡಲಾಗುತ್ತಿದ್ದು, ಸೋಮವಾರದಂದು ಬಿರಿಯಾನಿ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಮಟನ್ ದುಬಾರಿ, ಬೀಫ್ ಸೇರಿಸುವಂತೆ ಬೇಡಿಕೆ
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿ ಈಗಾಗಲೇ ನೀಡಲಾಗುತ್ತಿರುವ ಮಾಂಸಾಹಾರಿ ಆಹಾರದ ಜೊತೆಗೆ ಬೀಫ್ನ್ನೂ ಮೆನುವಿನಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಸಚಿವರು ಹೇಳಿದರು.
ಮಟನ್ ಬೆಲೆ ತುಸು ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳು ಅದನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಹೀಗಾಗಿ ಕಡಿಮೆ ವೆಚ್ಚದ ಆಯ್ಕೆಯಾಗಿ ಬೀಫ್ ಸೇರಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ಸಚಿವ ವನ್ನಿ ಅರಸು ವಿವರಿಸಿದರು.
ಆದರೆ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಹಾಸ್ಟೆಲ್ ಮೆನುವಿನಲ್ಲಿ ಮತ್ತಷ್ಟು ಬದಲಾವಣೆ
ವಿದ್ಯಾರ್ಥಿಗಳ ಅಭಿಪ್ರಾಯದ ಆಧಾರದ ಮೇಲೆ ಹಾಸ್ಟೆಲ್ಗಳ ಮೆನುವನ್ನು ಹಂತ ಹಂತವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಈ ಹಿಂದೆ ಮೆನುವಿನಲ್ಲಿದ್ದ ಉಪ್ಪಿಟ್ಟು ಮತ್ತು ಸೆಮಿಯಾ ಕಿಚಡಿಯನ್ನು ತೆಗೆದುಹಾಕಿ, ಬೆಳಗಿನ ಉಪಾಹಾರದಲ್ಲಿ ಇಡ್ಲಿ ಮತ್ತು ದೋಸೆಯಂತಹ ಆಹಾರಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು.
ಬೀಫ್ ಸೇರಿಸುವ ಪ್ರಸ್ತಾವಕ್ಕೆ ವಿರೋಧ
ಇದೇ ವೇಳೆ, ಪುತಿಯಾ ತಮಿಳಗಂ ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಕೃಷ್ಣಸ್ವಾಮಿ ಅವರು ಹಾಸ್ಟೆಲ್ ಮೆನುವಿನಲ್ಲಿ ಬೀಫ್ ಸೇರಿಸುವ ಸಾಧ್ಯತೆ ಕುರಿತು ಸಚಿವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂತಹ ನಿರ್ಧಾರವು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರೋಟೀನ್ ಹಾಗೂ ಅಗತ್ಯ ವಿಟಮಿನ್ಗಳನ್ನು ಒಳಗೊಂಡ ಸಮತೋಲಿತ ಪೌಷ್ಟಿಕ ಆಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೀಫ್ ಸೇರಿಸುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಕೃಷ್ಣಸ್ವಾಮಿ, ಸಚಿವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾಗಿ, ಕೆಲವು ವಿದ್ಯಾರ್ಥಿಗಳ ಬೇಡಿಕೆ ಹಾಗೂ ಅದಕ್ಕೆ ವ್ಯಕ್ತವಾಗಿರುವ ವಿರೋಧದ ನಡುವೆ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವಷ್ಟೇ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

