HomeIndiaಮುಸ್ಲಿಂ ವೈಯಕ್ತಿಕ ಕಾನೂನಿನಡಿ ಮದುವೆಯಾದರೂ ʼಪೋಕ್ಸೋʼ ಕಾಯ್ದೆಯಿಂದ ತಪ್ಪಿಸಿಕೊಳ್ಳಲಾಗದು ; ಕೇರಳ ಹೈಕೋರ್ಟ್ ಮಹತ್ವದ ತೀರ್ಪು...

ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಮದುವೆಯಾದರೂ ʼಪೋಕ್ಸೋʼ ಕಾಯ್ದೆಯಿಂದ ತಪ್ಪಿಸಿಕೊಳ್ಳಲಾಗದು ; ಕೇರಳ ಹೈಕೋರ್ಟ್ ಮಹತ್ವದ ತೀರ್ಪು !

ಮುಸ್ಲಿಂ ಧಾರ್ಮಿಕ ಪದ್ಧತಿಯಂತೆ ಮದುವೆಯಾಗಿದ್ದರೂ ಸಹ, ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಪೋಕ್ಸೋ (POCSO) ಕಾಯ್ದೆಯಡಿ ಗಂಭೀರ ಅಪರಾಧ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 17 ವರ್ಷದ ಬಾಲಕಿಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಮನ್ನಾರ್ಕ್ಕಾಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ಸದ್ಯ ಪಟ್ಟಾಂಬಿಯ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರ ಏಕಸದಸ್ಯ ಪೀಠ ಈ ಖಡಕ್ ಆದೇಶವನ್ನು ಹೊರಡಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, 2021ರ ಅಕ್ಟೋಬರ್ 23ರಂದು ಆರೋಪಿಯು ಬಾಲಕಿಗೆ ಹೊಸ ಬಟ್ಟೆ ಕೊಡಿಸುವುದಾಗಿ ನಂಬಿಸಿ ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಪ್ರತ್ಯೇಕ ಕೋಣೆಯಲ್ಲಿ ಕೂಡಿಹಾಕಿ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ಅಕ್ಟೋಬರ್ 23 ರಿಂದ 26ರ ವರೆಗೆ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಸತತ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಗಂಭೀರ ಆರೋಪವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯ ವಾದವೇನಿತ್ತು? ಆರೋಪಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಅರ್ಜಿ ಸಲ್ಲಿಸಿ, “ಘಟನೆ ನಡೆದಾಗ ಬಾಲಕಿಗೆ 17 ವರ್ಷ 1 ತಿಂಗಳಾಗಿತ್ತು. ಇಸ್ಲಾಮಿಕ್ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಆಕೆ ತನ್ನ ವಿವಾಹಿತ ಪತ್ನಿ. ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಇದು ಸಕ್ರಮ ವಿವಾಹವಾಗಿದ್ದು, ಐಪಿಸಿ ಸೆಕ್ಷನ್ 375ರ ವಿನಾಯಿತಿ 2ರ ಪ್ರಕಾರ ಪತ್ನಿಯ ಜೊತೆಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು” ಎಂದು ವಾದಿಸಿದ್ದ.

ನ್ಯಾಯಾಲಯದ ಕಟು ನಿಲುವು: ಆರೋಪಿಯ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಇಂಡಿಪೆಂಡೆಂಟ್ ಥಾಟ್’ ತೀರ್ಪನ್ನು ಉಲ್ಲೇಖಿಸಿದರು.

“ಮದುವೆಯಾದ ವ್ಯಕ್ತಿಗಳ ಪೈಕಿ ಒಬ್ಬರು ಅಪ್ರಾಪ್ತರಾಗಿದ್ದರೆ, ಧಾರ್ಮಿಕ ಅಥವಾ ವೈಯಕ್ತಿಕ ಕಾನೂನುಗಳ ಮಾನ್ಯತೆಯನ್ನು ಲೆಕ್ಕಿಸದೆ ಪೋಕ್ಸೋ ಕಾಯ್ದೆಯ ನಿಯಮಗಳು ನೇರವಾಗಿ ಅನ್ವಯಿಸುತ್ತವೆ. ಮುಸ್ಲಿಂ ಸಂಪ್ರದಾಯದಂತೆ ವಿವಾಹ ನಡೆದಿದೆ ಎಂದು ವಾದಕ್ಕಾಗಿಯೇ ಒಪ್ಪಿಕೊಂಡರೂ, ಸಂತ್ರಸ್ತೆಯು ಘಟನೆಯ ಸಮಯದಲ್ಲಿ ಅಪ್ರಾಪ್ತೆಯಾಗಿದ್ದ ಕಾರಣ ಆರೋಪಿಗೆ ಕ್ರಿಮಿನಲ್ ಹೊಣೆಗಾರಿಕೆಯಿಂದ ಯಾವುದೇ ರಕ್ಷಣೆ ಸಿಗುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಪೋಕ್ಸೋ ಕಾಯ್ದೆಯ ಸೆಕ್ಷನ್ 2(1)(d) ಪ್ರಕಾರ 18 ವರ್ಷದೊಳಗಿನ ಪ್ರತಿಯೊಬ್ಬ ವ್ಯಕ್ತಿಯೂ ‘ಮಗು’ ಎಂದೇ ಪರಿಗಣಿಸಲ್ಪಡುತ್ತಾರೆ. ಅಲ್ಲದೆ, ಸೆಕ್ಷನ್ 42A ಪ್ರಕಾರ ಈ ಕಾಯ್ದೆಯು ಇತರ ಎಲ್ಲ ಕಾನೂನುಗಳಿಗಿಂತ ಮೇಲ್ಪಂಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ 18 ವರ್ಷಕ್ಕಿಂತ ಕೆಳಗಿನ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಕಾನೂನಿನಡಿ ಅತ್ಯಾಚಾರವೇ ಆಗುತ್ತದೆ. ಇಲ್ಲಿ ಆಕೆ ಪತ್ನಿಯೇ ಅಥವಾ ಅಲ್ಲವೇ ಎಂಬುದು ಕಾನೂನಿನ ದೃಷ್ಟಿಯಲ್ಲಿ ಯಾವುದೇ ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿವಾಹ ನಡೆದಿರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲದಿರುವುದು ಹಾಗೂ ಬಾಲಕಿ ಮಾಡಿರುವ ಗಂಭೀರ ಆರೋಪಗಳು ಪ್ರಥಮ ದೃಷ್ಟಿಯಲ್ಲೇ ಅಪರಾಧ ಕೃತ್ಯವನ್ನು ಸಾಬೀತುಪಡಿಸುತ್ತಿರುವುದರಿಂದ, ಪ್ರಕರಣದ ಸತ್ಯಾಸತ್ಯತೆ ಪೂರ್ಣ ಪ್ರಮಾಣದ ವಿಚಾರಣೆಯ (ಟ್ರಯಲ್) ಮೂಲಕವೇ ನಿರ್ಧಾರವಾಗಬೇಕಿದೆ ಎಂದು ತಿಳಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular