ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರು(33) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿಯ ಯಲ್ಲಾಲಿಂಗ ಅನೇಕ ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಅವರು ಆರು ತಿಂಗಳಿನಿಂದ ಮತ್ತೆ ಇದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಯಲ್ಲಾಪುರ, ಬನವಾಸಿ ಪೋಲಿಸ್ ಠಾಣೆಗಳಲ್ಲೂ ಕಾರ್ಯನಿರ್ವಹಿಸಿ ಜನಾನುರಾಗಿ ಅಧಿಕಾರಿ ಎನಿಸಿಕೊಂಡಿದ್ದರು. ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು ಹೆಸರಾಗಿದ್ದರು. ಅನಾರೋಗ್ಯದ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೇವಲ 33 ವರ್ಷದಲ್ಲೇ ತಮ್ಮ ಕಾರ್ಯ ಚಟುವಟಿಕೆ ಮೂಲಕ ಜನಸ್ನೇಹಿ ಅಧಿಕಾರಿಯಾಗಿದ್ದ ಯಲ್ಲಾಲಿಂಗ ಅಕಾಲಿಕರಾಗಿ ನಿಧನರಾಗಿರುವುದು ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯಲ್ಲಿ ಆಘಾತ ಮೂಡಿಸಿದೆ. ಅವರ ನಿಧನಕ್ಕೆ ಪೊಲೀಸರು, ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

