ಮುಂಬೈ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿರಿಯಾನಿ ತಿಂದ ಮೇಲೆ ಕಲ್ಲಂಗಡಿ ಹಣ್ಣು ತಿಂದರೆ ಸಾವು ಗ್ಯಾರಂಟಿ ಎಂಬ ಸುಳ್ಳು ಸುದ್ದಿಯೊಂದು ಭಾರಿ ವೈರಲ್ ಆಗಿತ್ತು. ಮುಂಬೈನ ಪೈಧೋನಿ ಕುಟುಂಬದ ಸಾವಿಗೆ ಇದೇ ಕಾರಣ ಎಂದು ಬಿಂಬಿಸಲಾಗಿತ್ತು. ಆದರೆ ಈಗ ಹೊರಬಿದ್ದಿರುವ ವಿಧಿವಿಜ್ಞಾನ (FSL) ವರದಿಯು ಈ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದು, ಸಾವಿನ ಹಿಂದಿನ ಮೈನಡುಗಿಸುವ ಸತ್ಯವನ್ನು ಹೊರಹಾಕಿದೆ
ಹಣ್ಣಲ್ಲ, ಸಾವಿಗೆ ಕಾರಣ ಇಲಿ ಪಾಷಾಣ
ಫೊರೆನ್ಸಿಕ್ ತಜ್ಞರ ವರದಿಯ ಪ್ರಕಾರ, ಮೃತ ಅಬ್ದುಲ್ಲಾ ದೋಕಾಡಿಯಾ ಅವರ ಕುಟುಂಬದ ನಾಲ್ವರು ಸದಸ್ಯರ ದೇಹದಲ್ಲಿ ಮತ್ತು ಅವರು ತಿಂದಿದ್ದ ಕಲ್ಲಂಗಡಿ ಹಣ್ಣಿನಲ್ಲಿ ಜಿಂಕ್ ಫಾಸ್ಫೈಡ್ (Zinc Phosphide) ಎಂಬ ಅಪಾಯಕಾರಿ ವಿಷ ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸುವ ವಿಷವಾಗಿದೆ.
ನಡೆದಿದ್ದೇನು? ಸತ್ಯಾಂಶಗಳೇನು?
ಊಟದ ಬಳಿಕ ಘಟನೆ: ಅಬ್ದುಲ್ಲಾ ಅವರ ಕುಟುಂಬವು ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿ ಮಟನ್ ಬಿರಿಯಾನಿ ಬಡಿಸಿತ್ತು. ಆದರೆ, ಔತಣಕೂಟಕ್ಕೆ ಬಂದಿದ್ದ ಸಂಬಂಧಿಕರೆಲ್ಲರೂ ಆರೋಗ್ಯವಾಗಿದ್ದಾರೆ.
ಸಾವಿನ ಕರಾಳ ರಾತ್ರಿ: ಸಂಬಂಧಿಕರು ಹೋದ ಮೇಲೆ, ತಡರಾತ್ರಿ 1 ಗಂಟೆಗೆ ಕುಟುಂಬದ ಈ ನಾಲ್ವರು ಮಾತ್ರ ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಬೆಳಗಿನ ಜಾವ 5 ಗಂಟೆಗೆ ತೀವ್ರ ವಾಂತಿ-ಭೇದಿಯಾಗಿ ಎಲ್ಲರೂ ಮೃತಪಟ್ಟಿದ್ದರು.
ಹಸಿರು ಬಣ್ಣಕ್ಕೆ ತಿರುಗಿದ್ದ ಅಂಗಗಳು: ಮರಣೋತ್ತರ ಪರೀಕ್ಷೆಯ ವೇಳೆ ಮೃತರ ದೇಹದ ಒಳಗಿನ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿದ್ದವು. ಇದು ಕಲ್ಲಂಗಡಿಯಿಂದಾದ ಫುಡ್ ಪಾಯಿಸನ್ ಅಲ್ಲ, ಬದಲಾಗಿ ವಿಷಪ್ರಾಶನದ ಲಕ್ಷಣವಾಗಿತ್ತು.
ಕೊಲೆ ಸಂಚಿನ ಶಂಕೆ?
ಹಣ್ಣಿನೊಳಗೆ ವಿಷ ಬಂದಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ.ಯಾರಾದರೂ ಉದ್ದೇಶಪೂರ್ವಕವಾಗಿ ಇಂಜೆಕ್ಷನ್ ಮೂಲಕ ಹಣ್ಣಿಗೆ ಇಲಿ ವಿಷ ಬೆರೆಸಿದ್ದಾರೆಯೇ?ಅಬ್ದುಲ್ಲಾ ಅವರು ಒಂದು ದೊಡ್ಡ ವಂಚನೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು, ಅವರನ್ನು ತಡೆಯಲು ನಡೆದ ಕೊಲೆ ಸಂಚು ಇದೇ?
ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸುಳ್ಳು ಸುದ್ದಿ ನಂಬಬೇಡಿ
ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಂತೆ ಇದು ಬಿರಿಯಾನಿ ಮತ್ತು ಕಲ್ಲಂಗಡಿಯ ಕಾಂಬಿನೇಷನ್‌ನಿಂದಾದ ಸಾವಲ್ಲ. ಆದ್ದರಿಂದ ಸಾರ್ವಜನಿಕರು ಇಂತಹ ವೈಜ್ಞಾನಿಕ ಆಧಾರವಿಲ್ಲದ ವದಂತಿಗಳನ್ನು ನಂಬಿ ಆತಂಕಕ್ಕೊಳಗಾಗಬೇಡಿ.

