ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮೂಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಲೋಕಾಯುಕ್ತ ಪೊಲೀಸರು ತನಿಖೆಯ ಸ್ಥಿತಿಗತಿ ಬಗ್ಗೆ ಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.
ತನಿಖೆ ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ಎಸ್ ಪಿಪಿ ಕೋರ್ಟ್ ಗೆ ಮಾಹಿತಿ ನೀಡಿದರು. ಈ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ, ತನಿಖೆಯನ್ನು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಎಸ್ ಪಿಪಿ, ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವುದಾಗಿ ಹೇಳಿದರು.
ಇದಕ್ಕೆ ಕೋರ್ಟ್ ಕೇಸ್ ಡೈರಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ ಬಿ ರಿಪೋರ್ಟ್ ಗೆ ಸಂಬಂಧಿಸಿದಂತೆ ಹೆಚ್ಚುವರಿ ವಾದಮಂಡನೆಗಳಿದ್ದರೆ ಸಲ್ಲಿಸುವಂತೆ ಇಡಿ, ದೂರುದಾರ ಸ್ನೇಹಮಯಿ ಕೃಷ್ಣಗೆ ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿದೆ. ಬಳಿಕ ವಿಚಾರಣೆಯನ್ನು ಡಿಸೆಂಬರ್ 23ರಕ್ಕೆ ಮುಂದೂಡಿದೆ. ಅಂದು ಬಿ ರಿಪೋರ್ಟ್ ಸಂಬಂಧ ಕೋರ್ಟ್ ಆದೇಶ ನೀಡಲಿದೆ.

