ಬೆಂಗಳೂರು: ಐಎಎಸ್ ಅಧಿಕಾರಿ, MSME ಎಂಡಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ, ಅವರೊಂದಿಗೆ ಖುದ್ದು ನಾನೇ ಮಾಅತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ದೆಹಲಿಗೆ ಹೋಗಿಬರುತ್ತೇನೆ ಎಂದು ವಿಮಾನ ಟಿಕೆಟ್ ಬುಕ್ ಮಾಡಿ ಬೆಂಗಳೂರು ಏರ್ ಪೋರ್ಟ್ ಗೆ ಬಂದವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಹಿಂದೆ ಕೆಪಿಎಸ್ ಸಿಯಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಈಗ ಕೆಪಿಎಸ್ ಸಿ ಹಗರಣ ಬಯಲಾಗಿರುವ ಬೆನ್ನಲ್ಲೇ ಇಡಿ ಅಧಿಕಾರಿಗಳ ದಾಳಿಗೆ ಹೆದರಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರೊಂದಿಗೆ ನಾನೇ ಕರೆ ಮಾಡಿ ಮಾತನಾಡಿದ್ದೇನೆ. ಅವರ ತಂದೆಗೆ ಅನಾರೋಗ್ಯವಾಗಿದ್ದರಿಂದ ತುರ್ತು ಕಾರಣಕ್ಕೆ ಊರಾದ ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ. ಇನ್ನೆರಡು ದಿನಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿದ್ದಾರೆ ಎಂದರು.
ಇನ್ನು ಇಡಿ ದಾಳಿಗೆ ಹೆದರಿ ನಾಪತ್ತೆಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಅವರ ವಿರುದ್ಧ ಯಾವುದೇ ಆರೋಪಗಳಾಗಲಿ, ಕೇಸ್ ಗಳಾಗಲಿ ಇಲ್ಲ. ಹಾಗೊಂದು ವೇಳೆ ವಿಚಾರಣೆ ಎದುರಿಸಬೇಕಾದರೆ ತನಿಖೆ ನಡೆಯಲಿ ವಿಚಾರಣೆಗೆ ಸಿದ್ಧ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

