ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಅತ್ಯಂತ ಯಶಸ್ವಿ ನಾಯಕ, ‘ಥಾಲಾ’ ಎಂ.ಎಸ್. ಧೋನಿ ಅವರ ನಿವೃತ್ತಿಯ ಕುರಿತು ಕಳೆದ ಕೆಲವು ಸೀಸನ್‌ಗಳಿಂದ ಭಾರಿ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಡಿರುವ ಒಂದು ಪೋಸ್ಟ್, ಧೋನಿ ಅವರ ಐಪಿಎಲ್ ವಿದಾಯದ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ತೀವ್ರಗೊಳಿಸಿದೆ.
ಸೋಮವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಪಂದ್ಯವು ಸಿಎಸ್‌ಕೆ ತಂಡಕ್ಕೆ ಈ ಸೀಸನ್‌ನ ಕೊನೆಯ ತವರು ಪಂದ್ಯವಾಗಿದೆ (Final Home Game). ಈ ಪಂದ್ಯ ಮುಗಿದ ತಕ್ಷಣ ಯಾರೂ ಕ್ರೀಡಾಂಗಣದಿಂದ ಹೊರಗೆ ಹೋಗಬೇಡಿ, ಅಲ್ಲೇ ಇರಿ ಎಂದು ಸಿಎಸ್‌ಕೆ ತನ್ನ ಅಭಿಮಾನಿಗಳಲ್ಲಿ ವಿನಂತಿಸಿದೆ. “ಪಂದ್ಯ ಮುಗಿದ ನಂತರ ಎಲ್ಲಾ ಸೂಪರ್‌ಫ್ಯಾನ್ಸ್ ಕ್ರೀಡಾಂಗಣದಲ್ಲೇ ಉಳಿಯಬೇಕಾಗಿ ವಿನಂತಿ” ಎಂದು ಸಿಎಸ್‌ಕೆ ಪೋಸ್ಟ್ ಮಾಡಿದೆ.
ಧೋನಿ ವಿದಾಯದ ಮುನ್ಸೂಚನೆಯೇ? ಸಿಎಸ್‌ಕೆ ಮಾಡಿರುವ ಈ ದಿಢೀರ್ ಮನವಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಸ್ತುತ 44 ವರ್ಷದ ಎಂ.ಎಸ್. ಧೋನಿ ಅವರು ತೀವ್ರ ಗಾಯದ ಸಮಸ್ಯೆಯಿಂದಾಗಿ ಈ ಸೀಸನ್‌ನ ಒಂದೂ ಪಂದ್ಯವನ್ನು ಆಡಿಲ್ಲ. ಆದರೂ, ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಚೆನ್ನೈನಲ್ಲಿ ತೀವ್ರ ಅಭ್ಯಾಸ ನಡೆಸಿರುವುದು ಕಂಡುಬಂದಿದೆ. ಹೀಗಾಗಿ, ಧೋನಿ ಅವರು ಇಂದು ತಮ್ಮ ಕೊನೆಯ ಪಂದ್ಯದ ಬಳಿಕ ಕ್ರಿಕೆಟ್‌ಗೆ ಸಂಪೂರ್ಣ ವಿದಾಯ ಘೋಷಿಸಲಿದ್ದಾರಾ? ಅದಕ್ಕಾಗಿಯೇ ಸಿಎಸ್‌ಕೆ ಇಂತಹದೊಂದು ಪೋಸ್ಟ್ ಹಾಕಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಸಿಎಸ್‌ಕೆ ನೀಡಿದ ಸ್ಪಷ್ಟನೆ ಏನು? ಈ ಎಲ್ಲಾ ಊಹಾಪೋಹಗಳ ನಡುವೆ, ಫ್ರಾಂಚೈಸಿಯು ಈ ಮನವಿಯ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದೆ. ಪ್ರತಿ ಸೀಸನ್‌ನ ಕೊನೆಯ ತವರು ಪಂದ್ಯದ ಬಳಿಕ ಕ್ರೀಡಾಂಗಣಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ಸಿಎಸ್‌ಕೆ ಆಟಗಾರರು ಮೈದಾನದ ಸುತ್ತಲೂ ರೌಂಡ್ಸ್ ಹಾಕುವ ಸಾಂಪ್ರದಾಯಿಕ ‘ಲ್ಯಾಪ್ ಆಫ್ ಆನರ್’ (Lap of Honour) ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ. ಈ ಸೀಸನ್‌ನಲ್ಲಿ ಧೋನಿ ಪಂದ್ಯದ ದಿನಗಳಲ್ಲಿ ಚೆಪಾಕ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲವಾದರೂ, ಸೋಮವಾರದ ಪಂದ್ಯದ ನಂತರ ನಡೆಯುವ ಈ ಗೌರವ ಸಲ್ಲಿಕೆಯ ವೇಳೆ ಅವರು ಮೈದಾನಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.
ಧೋನಿ ಇದುವರೆಗೆ ತಮ್ಮ ನಿವೃತ್ತಿಯ ಬಗ್ಗೆ ಎಲ್ಲೂ ಸ್ಪಷ್ಟವಾಗಿ ಬಾಯಿ ಬಿಟ್ಟಿಲ್ಲ. ಆದರೂ ಚೆನ್ನೈ ಅಭಿಮಾನಿಗಳು ಧೋನಿ ಅವರ ಪ್ರತಿಯೊಂದು ಪಂದ್ಯವನ್ನು ಅವರ ಕೊನೆಯ ಪಂದ್ಯವೆಂದೇ ಭಾವಿಸಿ ಭಾವನಾತ್ಮಕವಾಗಿ ಕ್ರೀಡಾಂಗಣಕ್ಕೆ ಲಗ್ಗೆ ಇಡುತ್ತಿದ್ದಾರೆ. ಇಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮ ಧೋನಿ ಅವರ ವಿದಾಯದ ವೇದಿಕೆಯಾಗಲಿದೆಯೇ ಅಥವಾ ಕೇವಲ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುವ ಕಾರ್ಯಕ್ರಮವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

