HomeKarnatakaದಾವಣಗೆರೆ ಉಪ ಚುನಾವಣೆ: ರೇಣುಕಾಚಾರ್ಯ ಬಣಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್!

ದಾವಣಗೆರೆ ಉಪ ಚುನಾವಣೆ: ರೇಣುಕಾಚಾರ್ಯ ಬಣಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್!

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಘೋಷಣೆ ಮಾಡಿದೆ. ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್‌ ದಾಸಕರಿಯಪ್ಪ ಬಿಜೆಪಿ ಅಭ್ಯರ್ಥಿ. ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 23 ಕೊನೆಯ ದಿನವಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ದಾವಣಗೆರೆ ನಗರದಲ್ಲಿ ಮಾಜಿ ಮೇಯರ್ ಅಜಯ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಎಂ.ಪಿ.ರೇಣುಕಾಚಾರ್ಯ ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಾಕರಿಯಪ್ಪ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

ಆದರೆ ರೇಣುಕಾಚಾರ್ಯ ಅವರು ಬಿ.ಜೆ.ಅಜಯ್ ಕುಮಾರ್‌ಗೆ ಟಿಕೆಟ್ ಕೇಳಿದ್ದರು. ರೇಣುಕಾಚಾರ್ಯ ಬಣದ ಮುಖಂಡನಿಗೆ ಟಿಕೆಟ್ ಕೈತಪ್ಪಿದ್ದು, ಉಪ ಚುನಾವಣೆ ಮೇಲೆ ಇದು ಪ್ರಭಾವ ಬೀರಲಿದೆಯೇ? ಕಾದು ನೋಡಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಚಾರ್ಯ ಹೇಳಿದ್ದೇನು?: ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಎಂ.ಪಿ.ರೇಣುಕಾಚಾರ್ಯ ಮಾಧ್ಯಮಗಳ ಜೊತೆ ಮಾತನಾಡಿದರು. “ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದೆ, ಅವರಿಗೆ ಅಭಿನಂದನೆಗಳು” ಎಂದರು.

“ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷ ಒಂದು ಸಲ ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ಆ ತೀರ್ಮಾನವನ್ನು ನಾವು ಒಪ್ಪಿಕೊಳ್ಳಬೇಕು. ಅಭ್ಯರ್ಥಿ ಘೋಷಣೆಗೂ ಮೊದಲು ನಾವು ಬಿಜೆ ಅಜಯ್ ಕುಮಾರ್‌ಗೆ ಟಿಕೆಟ್ ಕೇಳಿದ್ದೆವು” ಎಂದು ಹೇಳಿದರು.

“ಅಜಯ್ ಮಾಜಿ ಮೇಯರ್, ಕ್ರಿಯಾಶೀಲ ಯುವಕ. 2023ರಲ್ಲಿ ಟಿಕೆಟ್ ಕೊಟ್ಟಿದ್ದರು ಬೇರೆ ಬೇರೆ ಕಾರಣಗಳಿಂದ ಹಿನ್ನೆಡೆ ಆಗಿತ್ತು. ಅಜಯ್ ಕುಮಾರ್ ಲಿಂಗಾಯತರು ಅಂತ ನಾವು ಟಿಕೆಟ್ ಕೇಳಿರಲಿಲ್ಲ” ಎಂದು ತಿಳಿಸಿದರು.

“ಸೋತಿರುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ದೆಹಲಿಗೆ ಹೋಗಿ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಯಾದ ರಾಧಾಮೋಹನ ದಾಸ್ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಗದೀಶ್ ಶೆಟ್ಟರ್ ಅವರಿಗೆ  ಮನವಿ ಸಲ್ಲಿಸಲಾಗಿತ್ತು” ಎಂದರು.

“ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮತ್ತು ಕೋರ್ ಕಮಿಟಿ ಸದಸ್ಯರಾದ ಗೋವಿಂದ ಎಂ.ಕಾರಜೋಳ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು” ಎಂದು ಹೇಳಿದರು.

“ಹೈಕಮಾಂಡ್ ಈಗ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇವೆ. ನಮ್ಮಲ್ಲಿ ಬಣ ಮುಖ್ಯ ಅಲ್ಲ ಇಲ್ಲಿ ಬಿಜೆಪಿ ಕಮಲದ ಚಿನ್ಹೆ ಮುಖ್ಯ” ಎಂದು ತಿಳಿಸಿದರು.

“ಕೆಲವು ಮಾಧ್ಯಮಗಳು ಅವರ ಗುಂಪಿಗೆ ಜಯ, ಇವರ ಗುಂಪಿಗೆ ಅಸಮಧಾನ ಅಂತ ವರದಿ ಮಾಡುತ್ತಾರೆ.  ನಮ್ಮದು ಕಮಲ ಚಿನ್ಹೆ, ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಸಿಹಿ ಕಹಿ ಮುಖ್ಯ ಅಲ್ಲ, ಕಹಿ ಕೊಟ್ರೂ ರಸ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗೆ ಇದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ  ಎರಡು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳನ್ನು ಪ್ರಜ್ಞಾವಂತ ಮತದಾರರು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಿಗೂ ಇದೆ” ಎಂದು ರೇಣುಕಾಚಾರ್ಯ ಹೇಳಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular