ವ್ಯಕ್ತಿಯೊಬ್ಬ ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ. ಹಾವು ಹಿಡಿಯುವವನಾಗಿದ್ದ ದೀಪಕ್ ವಿಷಪೂರಿತ ನಾಗರಹಾವು ಕಚ್ಚಿ ಸಾವನ್ನಪ್ಪಿದ್ದಾನೆ.
ತಾನು ರಕ್ಷಿಸಿದ ವಿಷಪೂರಿತ ನಾಗರಹಾವು ಕಚ್ಚಿ ಆತ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಮನೆಗಳು, ತೋಟಗಳು ಮತ್ತು ಶಾಲೆಗಳು, ಇತರೆಡೆಗಳಿಂದ ಹಾವುಗಳನ್ನು ರಕ್ಷಿಸುವ ಅಭ್ಯಾಸವನ್ನು ಹೊಂದಿದ್ದ ದೀಪಕ್ ಆ ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದ.
ಘಟನೆಯ ದಿನ, ಆತ ಒಂದು ನಾಗರಹಾವನ್ನು ಹಿಡಿದು ಗಾಜಿನ ಬಾಟಲಿಯಲ್ಲಿ ಇರಿಸಿದ್ದಾನೆ. ನಂತರ ಅದನ್ನು ಕಾಡಿಗೆ ಬಿಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ತನ್ನ ಮಗನ ಶಾಲೆಯಿಂದ ಅವನಿಗೆ ಕರೆ ಬಂದಿದ್ದು, ಆತುರದಲ್ಲಿ ಅವನು ತನ್ನ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ತನ್ನ ಮಗನನ್ನು ಕರೆತರಲು ಬೈಕ್ ನಲ್ಲಿ ತೆರಳಿದ್ದಾನೆ. ಸುತ್ತಿಕೊಂಡಿದ್ದ ಹಾವು ಅವನ ಕೈಗೆ ಕಚ್ಚಿದ್ದು, ವೈದ್ಯಕೀಯ ಚಿಕಿತ್ಸೆ ಪಡೆದರೂ, ಚಿಕಿತ್ಸೆ ಫಲಕಾರಿಯಾಗದೇ ದೀಪಕ್ ವಿಷಕ್ಕೆ ಬಲಿಯಾಗಿದ್ದಾನೆ.

