ಶಿವಮೊಗ್ಗ: ಶಿವಮೊಗ್ಗ ಹೊರವಲಯದ ತ್ಯಾವರೆಕೊಪ್ಪ ಹುಲಿ -ಸಿಂಹ ಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ(27) ಮೃತಪಟ್ಟವರು. ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿದ್ದ ಡಾ. ಸಮೀಕ್ಷಾ ರೆಡ್ಡಿ ಲಯನ್ ಸಫಾರಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10.30 ರ ಸುಮಾರಿಗೆ ಅವರು ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದಾರೆ. ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮರಾ ಮೂಲಕ ಪರೀಕ್ಷಿಸಲು ಆವರಣದ ಒಳಗೆ ಹೋದಾಗ ಏಕಾಏಕಿ ಅವರ ಮೇಲೆ ನೀರಾನೆ ದಾಳಿ ಮಾಡಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಡಾ. ಸಮೀಕ್ಷಾ ಅವರನ್ನು ಕೂಡಲೇ ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಮೀಕ್ಷಾ ಮೃತಪಟ್ಟಿದ್ದಾರೆ ಎನ್ನಲಾಗಿದೆ.

