ನವದೆಹಲಿ: ಎಂಬಿಬಿಎಸ್ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ಮತ್ತೊಂದು ಪ್ರಯತ್ನ, ಮರುಮೌಲ್ಯಮಾಪನಕ್ಕೆ(Re-Evaluation) ಅವಕಾಶ ಒದಗಿಸಬೇಕೆಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ನಿಯಮದ ಪ್ರಕಾರ, ಎಂ.ಬಿ.ಬಿ.ಎಸ್. ಮೊದಲ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ವಿದ್ಯಾರ್ಥಿಗಳಿಗೆ ಗರಿಷ್ಠ ನಾಲ್ಕು ಪ್ರಯತ್ನಗಳು ಮಾತ್ರ ಸಿಗುತ್ತವೆ. ನಾಲ್ಕು ಪ್ರಯತ್ನಗಳಲ್ಲಿಯೂ ಉತ್ತೀರ್ಣರಾಗದಿದ್ದರೆ, ಅವರು ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶವಿಲ್ಲ.
ಈ ನಿಯಮದ ಕಾರಣದಿಂದ ಕರ್ನಾಟಕದಲ್ಲಿ 275 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ.
ವಿಶೇಷವಾಗಿ ಕೋವಿಡ್–19 ಕಾಲದಲ್ಲಿ ಉಂಟಾದ ಶೈಕ್ಷಣಿಕ ವ್ಯತ್ಯಯಗಳಿಂದಾಗಿ ವಿದ್ಯಾರ್ಥಿಗಳು ಸರಿಯಾಗಿ ಓದಲು, ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ನಾಲ್ಕು ಪ್ರಯತ್ನಗಳ ನಂತರ ಅವರನ್ನು ಅನರ್ಹಗೊಳಿಸುವುದು ಅನ್ಯಾಯಕರ ಹಾಗೂ ಅಮಾನವೀಯವಾಗಿದೆ.
ಈ ನಿಯಮವನ್ನು ಮರುಪರಿಶೀಲಿಸಬೇಕೆಂದು ಅನೇಕ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಪ್ರೊ–ಚಾನ್ಸೆಲರ್ ಕೂಡ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಪತ್ರ ಬರೆದಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕೋರಿ ಅನೇಕ ವಿದ್ಯಾರ್ಥಿಗಳು ಈಗಾಗಲೇ ನ್ಯಾಯಾಲಯಗಳನ್ನು ಸಂಪರ್ಕಿಸಿ ಹೆಚ್ಚುವರಿ ಪ್ರಯತ್ನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಗೆ, ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಪ್ರೊ–ಚಾನ್ಸೆಲರ್ ಕೂಡ ಈ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಪತ್ರ ಬರೆದಿದ್ದಾರೆ.
ಕರ್ನಾಟಕ ಹೈಕೋರ್ಟ್ ಎನ್ಎಂಸಿ ಮಾರ್ಗಸೂಚಿಗಳ ಪ್ರಕಾರ ಸಂಪೂರ್ಣ ವಿಚಾರಣೆ ನಡೆಸಿದ ನಂತರ ಮರುಮೌಲ್ಯಮಾಪನ(Re-evaluation) ಮಾಡಲು ಆದೇಶ ನೀಡಿದೆ. ಆದಾಗ್ಯೂ, ವಿಶ್ವವಿದ್ಯಾಲಯವು ಮರುಮೌಲ್ಯಮಾಪನವನ್ನು ನಿರಾಕರಿಸುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದು ಮನವಿ ಸಲ್ಲಿಸಲಾಗಿದೆ.

