ಮಂಗಳೂರು: ಸ್ವಪಕ್ಷದ ಕಾರ್ಯಕರ್ತರೇ ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್ ಚೌಟ ವಿರುದ್ಧ ಸಿಡಿದೆದ್ದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದವರಿಗೆ ಅವಮಾನ ಮಾಡಿ ಕಳುಹಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂಸದರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದೂ ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿ ಮೂಲ್ಕಿ-ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮೂರು ವರ್ಷಗಳಲ್ಲಿ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಭೀಕರ ಅಪಘಾತಗಳು ಹೆಚ್ಚುತ್ತಿವೆ. ಕೇವಲ ಮೂರು ದಿನಗಳಲ್ಲಿ 4 ಅಪಘಾತ ನಡೆದು ಓರ್ವ ಮಹಿಳೆ ಮೃತಪಟ್ಟಿದ್ದರೆ. ಈ ವಿಚಾರವಾಗಿ ಸಂಸದರನ್ನ ಭೇಟಿಯಾಗಲು ಬಿಜೆಪಿ ಮುಖಂಡ ಸೂರಜ್ ಜೈನ್ ಹಾಗೂ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ತೆರಳಿದ್ದರು. ಈ ವೇಳೆ ಸಂಸದ ಬ್ರಿಜೇಶ್ ಚೌಟ ಉಡಾಫೆ ಉತ್ತರ ನೀಡಿದ್ದಾರೆ.
ಅವಘಡಗಳಿಗೆ ಹೆದ್ದಾರಿ ಇಲಾಖೆಯ ಕಾಮಗಾರಿಯೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ? ಈ ಕಾಮಗಾರಿ ಪೂರ್ಣ ಆಗುವವರೆಗೆ ಸರ್ವಿಸ್ ರಸ್ತೆ ಮಾಡಲು ಸಾಧ್ಯವಿಲ್ಲ. 2023ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ ಎಂದಿದ್ದಾರೆ.
ಅಲ್ಲದೇ ನೀವು ಹೇಳಿದಂತೆ ಕಾಮಗಾರಿ ಮಾಡಲು ಆಗಲ್ಲ. ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ. ಸ್ಥಳಕ್ಕೆ ಭೇಟಿ ನೀಡಲು ಕೇಳಿಕೊಂಡರೆ ಸದ್ಯಕ್ಕೆ ಸಾಧ್ಯವಿಲ್ಲ. ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎಂದು ಸಂಸದರು ಹೇಳಿರೋದಾಗಿ ದೂರಲಾಗಿದೆ. ಸಂಸದರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯಾದವರು ಜನರ ಸಮಸ್ಯೆಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಬೇಜವಾಬ್ದಾರಿಯಾಗಿ ಮಾತನಾಡಿದ್ದು, ತೀವ್ರ ಖಂಡನೆ ವ್ಯಕ್ತವಾಗಿದೆ.

