ನವದೆಹಲಿ: ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ಹೆಚ್ಚುತ್ತಿದೆ. ದುಬಾರಿ ದುನಿಯಾದಲ್ಲಿ ಜನಸಾಮಾನ್ಯರು ಬದುಕುವುದೂ ದುಸ್ಥರವಾಗುತ್ತಿದೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೆ ಬಿಗ್ ಶಾಕ್ ನೀಡಿದೆ. ಮತ್ತೆ ನೈಸರ್ಗಿಕ ಅನಿಲ (ಸಿಎನ್ ಜಿ) ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ನೈಸರ್ಗಿಕ ಅನಿಲ (ಸಿಎನ್ ಜಿ) ದರ 1 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದಷ್ಟೇ ಸಿಎನ್ ಜಿ ದರ 2 ರೂಪಾಯಿ ಏರಿಸಿದ್ದ ಕೇಂದ್ರ ಸರ್ಕಾರ ಈಗ ಕೇವಲ 48 ಗಂಟೆಗಳಲ್ಲಿ ಎರಡನೇ ಬಾರಿಗೆ ಮತ್ತೆ ದರ ಏರಿಕೆ ಮಾಡಿದೆ.
ಪರಿಷ್ಕೃತ ನೈಸರ್ಗಿಕ ಅನಿಲ ದರ ಏರಿಕೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಸಿಎನ್ ಜಿ ದರ ಇಂದು 90 ರೂಪಾಯಿ, ದೆಹಲಿಯಲ್ಲಿ ಕೆಜಿ ಸಿಎನ್ ಜಿ ದರ 80.09, ನೊಯ್ಡಾ, ಗಾಜಿಯಾಬಾದ್ ನಲ್ಲಿ ಸಿ ಎನ್ ಜಿ ದರ ಪ್ರತಿಕೆಜಿಗೆ 88.70 ರೂ, ಗುರುಗ್ರಾಮದಲ್ಲಿ ಪ್ರತಿ ಕೆಜಿಗೆ 84.12 ರೂಪಾಯಿ, ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಕೆಜಿ ಸಿಎನ್ ಜಿ 84 ರೂಪಾಯಿ ಇದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮವಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಸಿಎನ್ ಜಿ ದರ ಏರಿಕೆಯಿಂದ ಕಂಗಾಲಾಗಿರುವ ಆಟೋ, ಟ್ಯಾಕ್ಸಿ ಚಾಲಕರು ದಿನದಿಂದ ದಿನಕ್ಕೆ ಮತ್ತಷ್ಟು ಬೆಲೆ ಏರಿಕೆ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಮುಂದುವರೆದರೆ ಜೀವನ ನಡೆಸುವುದಾದರೂ ಹೇಗೆ? ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

