ಸೋಷಿಯಲ್ ಮೀಡಿಯಾದಲ್ಲಿ ಈಗ ಒಂದು ವಿಚಿತ್ರ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಮಗನಿಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಚಪ್ಪಲಿಯನ್ನು ಕೂರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.
ಸುಮಾರು ಏಳೆಂಟು ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದ್ದ ಈ ಕುಟುಂಬ, ತಲಾ 1,500 ರಿಂದ 1,700 ರೂಪಾಯಿ ನೀಡಿ ಒಟ್ಟು ಮೂರು ಸೀಟುಗಳನ್ನು ಬುಕ್ ಮಾಡಿತ್ತು. ಆದರೆ ಇಷ್ಟೊಂದು ಹಣ ನೀಡಿ ಸೀಟು ಬುಕ್ ಮಾಡಿದರೂ, ಆಕೆಯ ಪುಟ್ಟ ಮಗು ಮಾತ್ರ ಸೀಟಿನಲ್ಲಿ ಕೂರದೆ ತಾಯಿಯ ಮಡಿಲಲ್ಲೇ ಕುಳಿತುಕೊಂಡಿದೆ. ಇದರಿಂದ ಮಗನಿಗಾಗಿ ಮೀಸಲಿಟ್ಟಿದ್ದ ಸೀಟು ಖಾಲಿಯಾಗಿದೆ.
ಮಹಿಳೆಯು ಈ ದೃಶ್ಯವನ್ನು ತಮಾಷೆಯಾಗಿ ಚಿತ್ರೀಕರಿಸಿ ವಿಡಿಯೋ ಮಾಡಿದ್ದು, “ನನ್ನ ಮಗ ಸೀಟಿನಲ್ಲಿ ಕೂರದೆ ಮಡಿಲಲ್ಲಿ ಕುಳಿತಿದ್ದಾನೆ, ಹಾಗಾಗಿ 100 ರೂಪಾಯಿಯ ಚಪ್ಪಲಿ ಈಗ 1,500 ರೂಪಾಯಿ ಮೌಲ್ಯದ ಪ್ರೀಮಿಯಂ ಸೀಟಿನಲ್ಲಿ ರಾಜನಂತೆ ಕುಳಿತು ಪ್ರಯಾಣಿಸುತ್ತಿದೆ” ಎಂದು ಹಿಂದಿಯಲ್ಲಿ ಲೇವಡಿ ಮಾಡಿದ್ದಾರೆ. ಚಪ್ಪಲಿಯೇ ಈಗ ಶ್ರೀಮಂತಿಕೆಯ ಮಜಾ ಅನುಭವಿಸುತ್ತಿದೆ ಎಂದು ಅವರು ಹಾಸ್ಯದ ರೂಪದಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ರೈಲಿನಲ್ಲಿ ಸಾವಿರಾರು ಜನರಿಗೆ ಸೀಟು ಸಿಗದೆ ಪರದಾಡುತ್ತಿರುವಾಗ, ಹಣವಿದೆ ಎಂಬ ಕಾರಣಕ್ಕೆ ಹೀಗೆ ಸೀಟಿನ ಮೇಲೆ ಚಪ್ಪಲಿ ಇಟ್ಟು ವಿಡಿಯೋ ಮಾಡುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. “ಇಷ್ಟು ಬುದ್ಧಿ ಇಲ್ಲದ ಮೇಲೆ ಸೀಟು ಏಕೆ ಬುಕ್ ಮಾಡಬೇಕಿತ್ತು?” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಇಂತಹವರಿಗೆ ಶಿಕ್ಷೆಯಾಗಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕೆಲವು ನೆಟ್ಟಿಗರು ಇದನ್ನು ಕೇವಲ ತಮಾಷೆ ಎಂದು ಪರಿಗಣಿಸಿದ್ದು, ಚಪ್ಪಲಿಯ ಅದೃಷ್ಟವನ್ನೇ ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಐಷಾರಾಮಿ ರೈಲು ಎಂದೇ ಖ್ಯಾತಿಯಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಈ ‘ಚಪ್ಪಲಿ ಪ್ರಹಸನ’ ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

