ನವದೆಹಲಿ: ಈ ಬಾರಿ ವಾಡಿಕೆಗಿಂತ ಮುಂಚಿತವಾಗಿ ಮುಂಗಾರು ಆಗಮಿಸಲಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಳ್ಳಬಹುದು. ಮೇ ೨೬ರಂದು ಕೇರಳಂ ಗೆ ನೈಋತ್ಯ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೇ 26 ರಂದು ಕೇರಳಂಗೆ ಮುಂಗಾರು ಅಪ್ಪಳಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಪ್ರವೇಶಿಸುವ ಮುಂಗಾರು, ಈ ಬಾರಿ ಒಂದು ವಾರ ಮುಂಚಿತವಾಗಿಯೇ ಪ್ರವೇಶಿಸಲಿದೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಿದ್ದು, ಅಲ್ಲಿಂದ ಕೇರಳಂದತ್ತ ವೇಗವಾಗಿ ಚಲಿಸುತ್ತಿದೆ.
ಇನ್ನು ಕೇರಳಂಗೆ ಮುಂಗಾರು ಪ್ರವೇಶಿಸಿದ ಒಂದು ವಾರದ ಬಳಿಕ ಕರ್ನಾಟಕಕ್ಕೆ ಮುಂಗಾರು ಮಳೆ ಎಂಟ್ರಿಯಾಗಲಿದೆ. ಜೂನ್ ಮೊದಲ ವಾರದಲ್ಲಿ ಕರುನಾಡಿನಲ್ಲಿ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂರು ದಿನ ಭಾರಿ ಮಳೆ:
ಇನ್ನು ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದರೆ, ಮತ್ತೆ ಹಲವೆಡೆ ಬಿಸಿಲ ಝಳಕ್ಕೆ ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ 50% ಗಿಂತ ಹೆಚ್ಚಿನ ಪ್ರದೇಶದಲ್ಲಿ 3 ದಿನ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ. ರಾಯಚೂರು, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ , ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

