ನಾಳೆ ( ಮಾರ್ಚ್ 8 ) ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಟ್ರೋಫಿಗಾಗಿ ಕೊನೆಯ ಕಾಳಗವನ್ನು ನಡೆಸಲಿವೆ. ಎರಡು ತಂಡಗಳು ಬಲಿಷ್ಠವಾಗಿದ್ದು, ಯಾವ ತಂಡ ಟ್ರೋಫಿಗೆ ಮುತ್ತಿಕ್ಕಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನು ಭಾರತ ತಂಡ ಬಲಿಷ್ಠದಂತೆ ತೋರುತ್ತಿದ್ದರೂ, ತಂಡದಲ್ಲಿ ಕೆಲ ಆಟಗಾರರ ಫಾರ್ಮ್ ತಲೆ ನೋವಾಗಿ ಪರಿಣಮಿಸಿದೆ. ಅದರಲ್ಲೂ ವಿಶೇಷವಾಗಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಸಾಲು ಸಾಲು ಪಂದ್ಯಗಳಲ್ಲಿ ನೆಲಕಚ್ಚಿರುವುದು ಫೈನಲ್ ಪಂದ್ಯದಲ್ಲಿ ಆತನಿಗೆ ತಂಡದಲ್ಲಿ ಸ್ಥಾನ ನೀಡಬೇಕಾ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಚರ್ಚೆಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಸೇರಿಕೊಂಡಿದ್ದು, ಅಭಿಷೇಕ್ ಶರ್ಮರನ್ನು ತಂಡದಿಂದ ಹೊರಗಿಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಭಾರತ ತಂಡ ಸದ್ಯ ಅಭಿಷೇಕ್ ಶರ್ಮಗೆ ವಿರಾಮ ನೀಡಬಹುದು. ಆತ ಈಗಾಗಲೇ ಸಾಕಷ್ಟು ಪಂದ್ಯ ಆಡಿದ್ದು, ಬದಲಾವಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಚುಟುಕು ಕ್ರಿಕೆಟ್ ನಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು. ಬ್ರಾಂಡನ್ ಕಿಂಗ್ ಫಾರ್ಮ್ ಕಳೆದುಕೊಂಡ ಕಾರಣ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ರೋಸ್ಟನ್ ಚೇಸ್ ಅವರನ್ನು ಆರಂಭಿಕ ಆಟಗಾರನನ್ನಾಗಿ ಕಣಕ್ಕೆ ಇಳಿಸಿತ್ತು. ಆತನಿಗೆ ಐದಾರು ಪಂದ್ಯಗಳಲ್ಲಿ ಅವಕಾಶ ನೀಡಿ ನಂತರ ದೊಡ್ಡ ಪಂದ್ಯದಲ್ಲಿ ಕೈ ಬಿಟ್ಟಿತು. ಭಾರತ ತಂಡದಲ್ಲೂ ಸಂಜು ಸ್ಯಾಮ್ಸನ್ ಕರೆತಂದು ಬದಲಾವಣೆ ಮಾಡಿದಾಗ ಕೆಲಸ ನಿರ್ವಹಿಸಿತು’ ಎಂದು ಮೊಹಮ್ಮದ್ ಕೈಫ್ ಹೇಳಿದರು.
‘ಭಾರತ ತಂಡದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿರುವ ಆಟಗಾರರಿದ್ದಾರೆ. ರಿಂಕು ಸಿಂಗ್ ರಣಜಿ ಟ್ರೋಫಿ ಹಾಗೂ ಐಪಿಎಲ್ ಸೇರಿದಂತೆ ಎಲ್ಲಾ ಕಡೆ ರನ್ ಬಾರಿಸಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗು ಕುಲ್ದೀಪ್ ಯಾದವ್ ಸಹ ಎಲ್ಲಾ ಕಡೆ ವಿಕೆಟ್ ಕಬಳಿಸಿದ್ದಾರೆ. ಅಭಿಷೇಕ್ ಶರ್ಮ ಬದಲು ಯಾರನ್ನು ಕಣಕ್ಕಿಳಿಸಬಹುದು ಎಂದು ತಂಡದ ಕಡೆ ನೋಡಿದರೆ ಅಲ್ಲಿ ನಿಮಗೆ ರಿಂಕು ಸಿಂಗ್ ಕಾಣಿಸಿಗುತ್ತಾರೆ. ಹಾಗಾಗಿ ಆತನನ್ನು ತಂಡಕ್ಕೆ ಕರೆತನ್ನಿ. ಓರ್ವ ಮೈದಾನದಲ್ಲಿ ರನ್ ಕಲೆಹಾಕಲು ಪರದಾಡುತ್ತಿದ್ದರೆ, ಮತ್ತೋರ್ವ ಚೆನ್ನಾಗಿ ಆಡುತ್ತಿದ್ದರೂ ಸುಮ್ಮನೆ ಕುಳಿತಿದ್ದಾನೆ’ ಎಂದು ಮೊಹಮ್ಮದ್ ಕೈಫ್ ಅಭಿಷೇಕ್ ಬದಲು ರಿಂಕು ಕಣಕ್ಕಿಳಿಸಬೇಕು ಎಂದು ತಿಳಿಸಿದ್ದಾರೆ.

