HomeLatest News60:40 ಅನುಪಾತ ರಾಜ್ಯಗಳಿಗೆ ಹೊರೆ; ಕೇಂದ್ರದ ಮುಂದೆ ಖಂಡ್ರೆ ಹೊಸ ಬೇಡಿಕೆ

60:40 ಅನುಪಾತ ರಾಜ್ಯಗಳಿಗೆ ಹೊರೆ; ಕೇಂದ್ರದ ಮುಂದೆ ಖಂಡ್ರೆ ಹೊಸ ಬೇಡಿಕೆ

ಬೆಂಗಳೂರು: ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಒದಗಿಸುವ ಮನ್ರೇಗಾ (ವಿಬಿ ಜಿ ರಾಮ್ ಜಿ) ವೇತನ ಅನುಪಾತವನ್ನು ಕನಿಷ್ಠ 80:20ಕ್ಕಾದರೂ ಹೆಚ್ಚಿಸುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ Eshwar Khandre ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯುಪಿಎ ಸರ್ಕಾರ 2006ರಲ್ಲಿ ಜಾರಿ ಮಾಡಿದ ಮನ್ರೇಗಾ ಅಡಿಯಲ್ಲಿ ಒದಗಿಸಲಾಗುವ ಉದ್ಯೋಗಕ್ಕೆ ನೀಡುವ ಕೂಲಿಯ 90ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ರಾಜ್ಯ ಸರ್ಕಾರಗಳು ಕೇವಲ 10ರಷ್ಟು ಭರಿಸುತ್ತಿದ್ದವು ಎಂದು ತಿಳಿಸಿದರು.

60:40 ಅನುಪಾತ ರಾಜ್ಯಗಳ ಮೇಲೆ ಹೆಚ್ಚುವರಿ ಹೊರೆ

ಆದರೆ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜುಲೈ 1ರಿಂದ ಜಾರಿ ಮಾಡುತ್ತಿರುವ ವಿಬಿ ಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರ 60:40 ಅನುಪಾತದಡಿ ಹಣ ಒದಗಿಸುತ್ತಿದ್ದು, ಇದು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ಈ ಅನುಪಾತವನ್ನು ಹಿಂದೆ ಇದ್ದಂತೆ 90:10 ಮುಂದುವರಿಸಬೇಕು. ಇಲ್ಲವೇ ಕನಿಷ್ಠ 80:20ಕ್ಕಾದರೂ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

60 ದಿನ ಉದ್ಯೋಗ ನೀಡದ ಪ್ರಸ್ತಾಪ ಸರಿಯಲ್ಲ

ಇದರ ಜೊತೆಗೆ ವರ್ಷದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವು ಸರಿಯೂ ಅಲ್ಲ, ಸಮರ್ಥನೀಯವೂ ಅಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.

ಆಧುನಿಕ ಯುಗದಲ್ಲಿ ಕೃಷಿ ಕಾರ್ಯಕ್ಕೆ ಯಂತ್ರೋಪಕರಣಗಳು ಬಂದಿದ್ದು, ಬಹುತೇಕ ಗ್ರಾಮೀಣ ಭೂರಹಿತ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಅವರಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿಗೆ ರಜೆ ನೀಡುವ ಪ್ರಸ್ತಾಪ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯಗಳ ಸಚಿವರ ಸಭೆಯಲ್ಲಿ ವಿಷಯ ಪ್ರಸ್ತಾಪ

ಬರುವ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ Shivraj Singh Chouhan ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆ ನಡೆಯಲಿದೆ.

ಈ ಸಭೆಯಲ್ಲಿ ತಾವು ವೇತನ ಅನುಪಾತ ಹೆಚ್ಚಿಸುವಂತೆ ಹಾಗೂ 60 ದಿನಗಳ ಬಿಡುವು ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸುವುದಾಗಿ ಖಂಡ್ರೆ ತಿಳಿಸಿದರು.

ರಾಜ್ಯಗಳಿಗೆ ಉದ್ಯೋಗ ಆಯ್ಕೆಯ ಸ್ವಾತಂತ್ರ್ಯ ಬೇಕು

ಮನ್ರೇಗಾದ ನೂತನ ಸ್ವರೂಪವಾದ ವಿಬಿ ಜಿ ರಾಮ್ ಜಿ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಇಂತಹ ಕೆಲಸ ಮಾತ್ರ ಮಾಡಬೇಕು ಎಂದು ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಸಚಿವರು ಪ್ರತಿಪಾದಿಸಿದರು.

ರಾಜ್ಯಗಳಿಗೆ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವೇತನ ಪರಿಷ್ಕರಣೆಗೆ ಒತ್ತಾಯ

ಜೂನ್ 9ರಂದು ಕೇಂದ್ರ ಸಚಿವರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ತಾವು ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಳ ಮಾಡುತ್ತಿರುವುದರಿಂದ, ಇದಕ್ಕೆ ಅನುಗುಣವಾಗಿ ವಿಬಿ ಜಿ ರಾಮ್ ಜಿ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿದ್ದಾಗಿ ಸಚಿವರು ತಿಳಿಸಿದರು.

ಈ ಕುರಿತು ಕೇಂದ್ರ ಸಚಿವರು, ಇದಕ್ಕಾಗಿಯೇ ಒಂದು ವೇತನ ಆಯೋಗ ರಚಿಸಲಾಗಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular