ನಾಳೆ ( ಮಾರ್ಚ್ 8 ) ಸಂಜೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ ಮತ್ತೊಂದು ಮೆಗಾ ಹಣಾಹಣಿಗೆ ಸಾಕ್ಷಿಯಾಗಲಿದೆ.
ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯ ನಡೆಯಲಿದ್ದು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಅಂತಿಮ ಹೋರಾಟ ನಡೆಸಲಿವೆ.
ಸೆಮಿ ಫೈನಲ್ ಸುತ್ತಿನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್ ತಲುಪಿರುವ ನ್ಯೂಜಿಲೆಂಡ್ ಆಟಗಾರರು ಫೈನಲ್ ಪಂದ್ಯಕೂ ಮುನ್ನ ಭಾರತ ತಂಡವನ್ನು ಸೋಲಿಸಲಿದ್ದೇವೆ ಎಂಬ ಹೇಳಿಕೆಗಳನ್ನು ನೀಡತೊಡಗಿದ್ದಾರೆ.
ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಗ್ಲೆನ್ ಫಿಲಿಪ್ಸ್ ಬುಮ್ರಾ ಕುರಿತು ಹೇಳಿಕೆ ನೀಡಿ ಆತನು ಕೂಡ ಮನುಷ್ಯ ಆತನಿಗೆ ಪ್ರತಿದಿನವೂ ಒಳ್ಳೆಯ ದಿನ ಬರುವುದಿಲ್ಲ, ನಾಳೆ ಕೆಟ್ಟ ದಿನ ಬರಲಿದೆ ಎಂದು ಹೇಳಿಕೆ ನೀಡುವ ಮೂಲಕ ಮೈದಾನದಿಂದ ಆಚೆ ಸ್ಲಡ್ಜ್ ಮಾಡಿದರೆ, ಇದರ ಬೆನ್ನಲ್ಲೇ ಇದೀಗ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಸಹ ಭಾರತ ತಂಡವನ್ನು ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜಮಾಯಿಸಲಿರುವ ಭಾರತ ತಂಡದ ಅಭಿಮಾನಿಗಳ ಬಾಯಿ ಮುಚ್ಚಿಸುವುದೇ ನಮ್ಮ ಗುರಿ ಎಂದು ಹೇಳಿಕೆ ನೀಡುವ ಮೂಲಕ ಮಿಚಲ್ ಸ್ಯಾಂಟ್ನರ್ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನೀಡಿದ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಅಲ್ಲದೆ ಟ್ರೋಫಿಗಾಗಿ ನಾವು ಕೋಟ್ಯಂತರ ಅಭಿಮಾನಿಗಳ ಹೃದಯ ಹೊಡೆಯುಬಹುದು ಎಂದೂ ಸಹ ಮಿಚಲ್ ಸ್ಯಾಂಟ್ನರ್ ಹೇಳಿಕೊಂಡಿದ್ದಾರೆ.

