ರಾಯಚೂರು: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ (SSLC) ಮತ್ತು ಪಿಯುಸಿ (PUC) ಪರೀಕ್ಷೆಗಳು ಮುಕ್ತಾಯಗೊಂಡು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ, ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಹೌದು. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತ ಬಾಲಕಿಯರು ಪ್ರೇಮದ ಬಲೆಗೆ ಬಿದ್ದು ಯುವಕರೊಂದಿಗೆ ಮನೆ ಬಿಟ್ಟು ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಅವರು, ರಜೆಯ ಅವಧಿಯಲ್ಲಿ ಹೆಣ್ಣುಮಕ್ಕಳ ಮೊಬೈಲ್ ಬಳಕೆ ಹಾಗೂ ನಡವಳಿಕೆಯ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವಂತೆ ಪೋಷಕರಿಗೆ ತುರ್ತು ಎಚ್ಚರಿಕೆ ನೀಡಿದ್ದಾರೆ.
ಪ್ರೇಮದ ಬಲೆಯಲ್ಲಿ ಸಿಲುಕಿ ನಾಪತ್ತೆ : ಪರೀಕ್ಷೆಗಳು ಮುಗಿದ ಬೆನ್ನಲ್ಲೇ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರು ಪ್ರೇಮದ ಬಲೆಯಲ್ಲಿ ಸಿಲುಕಿ, ಯುವಕರೊಂದಿಗೆ ಮನೆ ಬಿಟ್ಟು ಹೋಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ರೀತಿ ಅಪ್ರಾಪ್ತ ಬಾಲಕಿಯರನ್ನು ವಯಸ್ಕ ಯುವಕರು ಕರೆದೊಯ್ದರೆ ಅಥವಾ ಅವರೊಂದಿಗೆ ಬಾಲಕಿಯರು ನಾಪತ್ತೆಯಾದರೆ, ಕಾನೂನುಬದ್ಧವಾಗಿ ಅದನ್ನು ‘ಅಪಹರಣ’ (Kidnapping Case) ಎಂದೇ ಪರಿಗಣಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರಿಗೆ ಜಿಲ್ಲಾ ಎಸ್ಪಿ ಮನವಿ: ಮಕ್ಕಳು ದಿಢೀರನೆ ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಅವರು ಪೋಷಕರಿಗೆ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.”ಬೇಸಿಗೆ ರಜೆಯ ಅವಧಿಯಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಅವರ ನಡವಳಿಕೆ, ಮೊಬೈಲ್ ಬಳಕೆ ಮತ್ತು ಸ್ನೇಹಿತರ ಬಗ್ಗೆ ಗಮನವಿರಲಿ. ಮಕ್ಕಳು ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಹತ್ತಿರದಿಂದ ಗಮನಿಸಿ, ಎಚ್ಚರಿಕೆಯಿಂದ ಇರಬೇಕು” ಎಂದು ಎಸ್ಪಿ ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯು ತನಿಖೆಯನ್ನು ಚುರುಕುಗೊಳಿಸಿದ್ದು, ನಾಪತ್ತೆಯಾದ ಬಾಲಕಿಯರ ಪತ್ತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.

