ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜೀವನ, ಸಾಧನೆ ಕುರಿತು ಅಧ್ಯಯನ ನಡೆಸಲು ಎಸ್.ಎಂ. ಕೃಷ್ಣ ಅಧ್ಯಯನ ಪೀಠ ಸ್ಥಾಪಿಸಬೇಕೆಂಬ ಶಾಸಕ ದಿನೇಶ್ ಗೂಳಿಗೌಡ ಅವರ ಮನವಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸ್ಪಂದಿಸಿದ್ದಾರೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗೆ ಸೂಚನೆ ನೀಡಿದ್ದಾರೆ.
ಈ ಅಧ್ಯಯನ ಪೀಠದಿಂದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಎಸ್.ಎಂ. ಕೃಷ್ಣ ಅವರ ಆಡಳಿತಾತ್ಮಕ ಕಾರ್ಯ ಪದ್ಧತಿಗಳನ್ನು ಸಂಶೋಧನೆಗೆ ಒಳಪಡಿಸಿ ಭವಿಷ್ಯದ ಸಾರ್ವಜನಿಕ ಸೇವೆಗೆ ಪೂರಕ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರ ಎಸ್.ಎಂ. ಕೃಷ್ಣ ಅಧ್ಯಯನ ಪೀಠ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಎಸ್.ಎಂ. ಕೃಷ್ಣ ಅವರ ಹುಟ್ಟುಹಬ್ಬದ ದಿನವಾದ ಮೇ 1 ರಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರಿಗೆ ಶಾಸಕ ದಿನೇಶ್ ಗೂಳಿಗೌಡ ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ವಿವಿ ಉಪಕುಲಪತಿಗೆ ಸೂಚಿಸಿದ್ದಾರೆ.
ಬೆಂಗಳೂರನ್ನು ಜಾಗತಿಕ ಐಟಿ ಬಿಟಿ ಕೇಂದ್ರವನ್ನಾಗಿ ರೂಪಿಸುವಲ್ಲಿ ಎಸ್.ಎಂ. ಕೃಷ್ಣ ಅವರ ಪಾತ್ರ ಪ್ರಮುಖವಾಗಿದೆ. ನಗರಾಭಿವೃದ್ಧಿಯಷ್ಟೇ ಅಲ್ಲದೆ ಗ್ರಾಮೀಣ ಕರ್ನಾಟಕದ ಸಬಲೀಕರಣಕ್ಕಾಗಿ ಕಂದಾಯ ದಾಖಲೆಗಳನ್ನು ಗಣಕೀಕರಿಸಿದ ಭೂಮಿ ಯೋಜನೆ, ರೈತರಿಗಾಗಿ ಯಶಸ್ವಿನಿ ಆರೋಗ್ಯ ವಿಮೆ, ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಬಿಸಿಯೂಟ ಯೋಜನೆಗಳನ್ನು ಎಸ್.ಎಂ. ಕೃಷ್ಣ ಜಾರಿಗೆ ತಂದಿದ್ದಾರೆ. ಅವರ ಆಡಳಿತಾತ್ಮಕ ದೂರದೃಷ್ಟಿ, ಸಜ್ಜನಿಕೆ, ರಾಜತಾಂತ್ರಿಕ ನೈಪುಣ್ಯತೆ ಇಂದಿನ ರಾಜಕಾರಣಿಗಳಿಗೆ ಮಾದರಿ, ಯುವಕರಿಗೆ ಅನುಕರಣೀಯ. ಈ ಹಿನ್ನೆಲೆಯಲ್ಲಿ ಮೈಸೂರು ಅಥವಾ ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.

