ಶಿವಮೊಗ್ಗ: ಭದ್ರಾವತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಮಳೆಯಿಂದ ಹಾನಿ ಉಂಟಾಗಿದೆ. ನಾವು ಡಿಸಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
20 ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿದೆ. ಜಂಟಿ ಸಮೀಕ್ಷೆ ನಡೆಸಿ ನಂತರ ಪರಿಹಾರವನ್ನು ಒದಗಿಸಲಾಗುವುದು. ಸಂಪೂರ್ಣ ಹಾನಿಗೆ ಒಳಗಾದ ಮನೆಗಳಿಗೆ ಹಣವನ್ನು ನೀಡಲಾಗುವುದು. ಅವರಿಗೆ ಪರಿಹಾರದ ಜೊತೆಗೆ ಒಂದು ಮನೆ ಸಹ ನೀಡಲಾಗುವುದು. ಶಿವಮೊಗ್ಗದ ಅನೇಕ ಜನಪ್ರತಿನಿಧಿಗಳಿಂದ ಹೆಚ್ಚುವರಿ ಪರಿಹಾರಕ್ಕೆ ಮನವಿ ಬಂದಿದೆ ಎಂದು ಹೇಳಿದ್ದಾರೆ.
ಇದನ್ನು ಹಣಕಾಸು ವಿಭಾಗ ಮಾಡಬೇಕಾದ ಕಾರಣದಿಂದ ಸಿಎಂ ರವರ ಜೊತೆ ಮಾತನಾಡುತ್ತೇನೆ. ಈಗಿನ ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ನೀಡಲಾಗುವುದು. ಹೆಚ್ಚುವರಿ ಪರಿಹಾರದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಹವಮಾನ ಬದಲಾವಣೆ ಬಗ್ಗೆ ಸರ್ಕಾರ ಹಾಗೂ ಸಮಾಜ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕಲಘಟಗಿ, ಶಿವಮೊಗ್ಗ, ಬೆಂಗಳೂರಿನಲ್ಲೂ ಸಹ ಹವಾಮಾನ ಬದಲಾವಣೆ ಉಂಟಾಗಿ ಭಾರಿ ಮಳೆ ಉಂಟಾಗುತ್ತಿದೆ. ಜಾಗತಿಕ ತಾಪಮಾನವು ಮಾನವರಿಂದಲೇ ಆಗುತ್ತಿದೆ. ಬರ ಸೇರಿದಂತೆ ಅತಿವೃಷ್ಟಿಯು ಸಹ ನಮ್ಮಿಂದಲೇ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಮುಂಜಾಗ್ರತೆ ಕೈಗೊಳ್ಳಲು ನಮ್ಮಲ್ಲಿ ಇನ್ನೂ ಉಪಕರಣಗಳಿಲ್ಲ. ನಾವು ಪರಿಸರವನ್ನು ಕಾಪಾಡಿಕೊಳ್ಳುವುದರ ಜೊತೆ ಹೊಂದಾಣಿಕೆಯಿಂದ ಹೋಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮಳೆಮಾಪನ ಕೇಂದ್ರ ದುರಸ್ತಿಯ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಒಟ್ಟು 6 ಸಾವಿರ ಮಳೆ ಮಾಪನ ಕೇಂದ್ರ ಇವೆ. ಹಾಳಾಗಿರುವ ಕಡೆ ಹೊಸ ಯಂತ್ರ ಸ್ಥಾಪನೆ ಮಾಡಲಾಗುತ್ತದೆ. ಬೆಳೆ ವಿಮೆಗೆ ಇದು ತೊಡಕಾಗಿದೆ. ಹೀಗಾಗಿ ಅದಷ್ಟು ಬೇಗ ದುರಸ್ತಿಗೆ ಕ್ರಮ ತೆಗದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯಸರ್ಕಾರದಲ್ಲಿ ಸಚಿವ ಸಂಪುಟ ಹಾಗೂ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವ ಕಾಲಕ್ಕೆ ಏನು ಆಗುತ್ತದೆಯೋ ಅದು ಆಗುತ್ತದೆ. ಜನ ನಮಗೆ ಈ ಸ್ಥಾನ ಕೊಟ್ಟಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಎಲ್ಲರು ಹೊಂದಿಕೊಳ್ಳಬೇಕಾಗುತ್ತದೆ. ಜನ ನಮಗೆ ಅವಕಾಶ, ಜವಾಬ್ದಾರಿ ಕೊಟ್ಟು ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತೇನೆ. ನಾವು ಜನರ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ರಾಜಕೀಯದಲ್ಲಿ ಆಸೆ ಆಕ್ಷಾಂಕ್ಷೆಗಳು, ಬದಲಾವಣೆಗಳು ಇರುತ್ತವೆ. ನಾವು ನಿರ್ಲಪ್ತತೆಯಿಂದ ಇರಲು ಆಗಲ್ಲ ಎಂದು ಹೇಳಿದ್ದಾರೆ.
ಕರ್ಮಷಿಯಲ್ ಸಿಲಿಂಡರ್ ದರ ಏರಿಕೆ ಕುರಿತು ಚುನಾವಣೆ ಇರುವ ತನಕ ಒಂದು ನೀತಿ, ಚುನಾವಣೆ ಮುಗಿದ ಮೇಲೆ ಇನ್ನೂಂದು ನೀತಿಯೇ ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಸಿಲಿಂಡರ್ ಬ್ಲಾಕ್ ಮಾರ್ಕೆಟ್ ನಲ್ಲಿ ಸಿಗುತ್ತದೆ ಆಂದ್ರೆ, ಸರಿಯಾದ ಮಾರ್ಗದಲ್ಲಿ ಯಾಕೆ ಸಿಗುತ್ತಿಲ್ಲ. ಇಲ್ಲಿ ದಂಧೆಕೋರರಿಗೆ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಕೇಂದ್ರ ಸರ್ಕಾರ ಸಿಲಿಂಡರ್ ನ್ನು ಸರಿಯಾಗಿ ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.
2023 ರಲ್ಲಿಯೇ ಮಹಿಳಾ ಮೀಸಲಾತಿಗೆ ಕಾನೂನು ಮಾಡಲಾಗಿತ್ತು. ಆದರೆ ಚುನಾವಣೆ ನಡೆಯವ ಸಂದರ್ಭದಲ್ಲಿಯೇ ವಿಶೇಷ ಅಧಿವೇಶನ ಕರೆಯುವುದರ ಹಿಂದೆ ಎನಿದೆ? ದಕ್ಷಿಣ ರಾಜ್ಯಗಳ ಸ್ಥಾನ ಕಡಿಮೆ ಮಾಡಲು ಹುನ್ನಾರ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

