ಶಿವಮೊಗ್ಗ: ವಿದ್ಯುತ್ ಸಂಪರ್ಕ ಕಲ್ಪಿಸಲು ಕಟ್ಟಡ ವೀಕ್ಷಿಸುವಾಗ ಏಣಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೆಸ್ಕಾಂ ಶಾಖಾಧಿಕಾರಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಘಟನೆ ನಡೆದಿದೆ. ಜಡೆ ಮೆಸ್ಕಾಂ ಶಾಖಾಧಿಕಾರಿ 46 ವರ್ಷದ ಮಹಾನಿಂಗ್ ಅಪರಾಜ್(ಮಹಾಲಿಂಗಪ್ಪ) ಮೃತಪಟ್ಟವರು ಎಂದು ಹೇಳಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐನಾಪುರ ಗ್ರಾಮದ ಮಹಾನಿಂಗ್ ಅಪರಾಜ್ ಪವರ್ ಮ್ಯಾನ್ ಉದ್ಯೋಗ ಪಡೆದು ಮೆಸ್ಕಾಂ ನಲ್ಲಿ ಹಂತ ಹಂತವಾಗಿ ಬಡ್ತಿ ಹೊಂದಿ ಕಿರಿಯ ಎಂಜಿನಿಯರ್ ಆಗಿ ಜಡೆ ಮೆಸ್ಕಾಂ ಶಾಖಾಧಿಕಾರಿಯಾಗಿದ್ದರು.
ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿದ್ದು, ಜಡೆ ಆನವಟ್ಟಿ ಭಾಗದಲ್ಲಿ ಜನಾನುರಾಗಿಯಾಗಿದ್ದರು. ಭಾನುವಾರ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೀಕ್ಷಿಸುವಾಗ ಏಣಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಟ್ಟಡದ ಗೋಡೆಗೆ ಅವರ ತಲೆ ಬಡಿದ ಪರಿಣಾಮ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರಿಗೆ ತಾಯಿ, ಪತ್ನಿ, ಅಕ್ಕ, ಇಬ್ಬರು ಸಹೋದರರು ಇದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

