ಬೆಳಗಿನ ಗಡಿಬಿಡಿಯಲ್ಲಿ ಸುಲಭವಾಗಿ ಮತ್ತು ಆರೋಗ್ಯಕರವಾಗಿ ಏನಾದರೂ ತಿಂಡಿ ಮಾಡಬೇಕು ಅಂದುಕೊಂಡರೆ ಮೆಂತ್ಯ ಬಾತ್ ಅತ್ಯುತ್ತಮ ಆಯ್ಕೆಯಾಗಿದೆ. ಮೆಂತ್ಯ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹೋಟೆಲ್ ಶೈಲಿಯಲ್ಲಿಯೇ ಮನೆಯಲ್ಲಿ ಅತ್ಯಂತ ಸುಲಭವಾಗಿ ಮತ್ತು ಟೇಸ್ಟಿಯಾಗಿ ಮೆಂತ್ಯ ಬಾತ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು ಅಕ್ಕಿ, ತಾಜಾ ಮೆಂತ್ಯ ಸೊಪ್ಪು, ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು, ಪುದೀನಾ, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಸಾಸಿವೆ, ಜೀರಿಗೆ, ಅರಿಶಿನ ಪುಡಿ, ಎಣ್ಣೆ ಅಥವಾ ತುಪ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಮಸಾಲೆಯನ್ನು ಸಿದ್ಧಪಡಿಸಿಕೊಳ್ಳಿ. ಮತ್ತೊಂದೆಡೆ ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
ಈಗ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಮತ್ತು ಬಿರಿಯಾನಿ ಎಲೆಯನ್ನು ಹಾಕಿ ಕೈಯಾಡಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಟೊಮೆಟೊ ಮತ್ತು ಹೆಚ್ಚಿದ ಮೆಂತ್ಯ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬಾಡಿಸಿ. ಮೆಂತ್ಯ ಸೊಪ್ಪಿನ ಹಸಿ ವಾಸನೆ ಹೋದ ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿ.
ನಂತರ ಇದಕ್ಕೆ ಅರಿಶಿನ ಪುಡಿ ಮತ್ತು ತೊಳೆದ ಅಕ್ಕಿಯನ್ನು ಸೇರಿಸಿ ಮಸಾಲೆಯೊಂದಿಗೆ ಲಘುವಾಗಿ ಮಿಕ್ಸ್ ಮಾಡಿ. ಈಗ ಅಕ್ಕಿಯ ಅಳತೆಗೆ ತಕ್ಕಂತೆ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕೈಯಾಡಿಸಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಮಧ್ಯಮ ಉರಿಯಲ್ಲಿ ಎರಡು ಸೀಟಿ ಕೂಗಿಸಿದರೆ ಬಿಸಿಬಿಸಿಯಾದ ಮತ್ತು ಪರಿಮಳಯುಕ್ತ ಮೆಂತ್ಯ ಬಾತ್ ಸವಿಯಲು ಸಿದ್ಧವಾಗುತ್ತದೆ. ಇದನ್ನು ಮೊಸರು ಬಜ್ಜಿಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.

