ನವದೆಹಲಿ : ‘ಋತುಸ್ರಾವ ನೈರ್ಮಲ್ಯ’ (Menstrual Hygiene) ಕೇವಲ ಆರೋಗ್ಯದ ವಿಷಯವಲ್ಲ, ಅದು ಮಹಿಳೆಯರ ಮೂಲಭೂತ ಹಕ್ಕು ಮತ್ತು ಗೌಪ್ಯತೆಯ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ
ಋತುಚಕ್ರದ ನೈರ್ಮಲ್ಯದ ಹಕ್ಕು (Right to Menstrual Hygiene) ಸಂವಿಧಾನದ 21ನೇ ವಿಧಿಯಡಿ ಬದುಕುವ ಹಕ್ಕು ಮತ್ತು ಗೌಪ್ಯತೆಯ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರ ಘನತೆ, ಆರೋಗ್ಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಶಾಲೆಗಳಿಗೆ ಸರಣಿ ನಿರ್ದೇಶನಗಳನ್ನು ನೀಡಿದೆ.
ಭಾರತದ ನಗರ ಮತ್ತು ಗ್ರಾಮೀಣ ಭಾಗದ ಖಾಸಗಿ ಅಥವಾ ಸರ್ಕಾರಿ ಎಂಬ ಭೇದವಿಲ್ಲದೆ ಎಲ್ಲಾ ಶಾಲೆಗಳು ಹೆಣ್ಣುಮಕ್ಕಳಿಗೆ ಅತ್ಯುನ್ನತ ಸುರಕ್ಷತೆ ಮತ್ತು ನೈರ್ಮಲ್ಯದ ಗುಣಮಟ್ಟ ಹೊಂದಿರುವ ಪರಿಸರ ಸ್ನೇಹಿ (Biodegradable) ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಪರಿಸರ ಸ್ನೇಹಿ (Biodegradable) ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶಿಸಿದೆ.ಪ್ರತಿಯೊಂದು ಶಾಲೆಯಲ್ಲಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇರಬೇಕು ಹಾಗೂ ಅಂಗವಿಕಲ ಸ್ನೇಹಿ ಶೌಚಾಲಯಗಳ ವ್ಯವಸ್ಥೆ ಇರಬೇಕು ಎಂದು ಕೋರ್ಟ್ ಹೇಳಿದೆ.
ಖಾಸಗಿ ಶಾಲೆಗಳಿಗೂ ಅನ್ವಯ: ಈ ನಿಯಮಗಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡಕ್ಕೂ ಕಡ್ಡಾಯ. ಪ್ರತ್ಯೇಕ ಶೌಚಾಲಯ ಅಥವಾ ಉಚಿತ ಪ್ಯಾಡ್‌ಗಳನ್ನು ನೀಡದ ಖಾಸಗಿ ಶಾಲೆಗಳ ಮಾನ್ಯತೆ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದು ದಾನವಲ್ಲ, ಹಕ್ಕು: “ಋತುಚಕ್ರದ ನೈರ್ಮಲ್ಯವು ದಾನ ಅಥವಾ ನೀತಿಯ ವಿವೇಚನೆಯ ವಿಷಯವಲ್ಲ, ಬದಲಿಗೆ ಘನತೆಯಿಂದ ಬದುಕುವ ಸಾಂವಿಧಾನಿಕ ಹಕ್ಕು” ಎಂದು ಪೀಠವು ಸ್ಪಷ್ಟಪಡಿಸಿದೆ
ನ್ಯಾಯಮೂರ್ತಿಗಳು ಹೇಳಿದ್ದೇನು..?
ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು, “ಈ ತೀರ್ಪು ಕೇವಲ ಕಾನೂನು ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಇದು ಸಹಾಯ ಕೇಳಲು ಹಿಂಜರಿಯುವ ತರಗತಿಯ ಹೆಣ್ಣುಮಕ್ಕಳಿಗೆ ಮತ್ತು ಸಂಪನ್ಮೂಲಗಳ ಕೊರತೆಯಿಂದ ಸಹಾಯ ಮಾಡಲಾಗದ ಶಿಕ್ಷಕರಿಗೆ ಮೀಸಲಾಗಿದೆ. ಸಮಾಜದ ದುರ್ಬಲರನ್ನು ನಾವು ಹೇಗೆ ರಕ್ಷಿಸುತ್ತೇವೆ ಎಂಬುದರ ಮೇಲೆ ನಮ್ಮ ಪ್ರಗತಿ ಅಳೆಯಲಾಗುತ್ತದೆ” ಎಂದು ಮಾರ್ಮಿಕವಾಗಿ ಹೇಳಿದರು.
ಹಿನ್ನೆಲೆ: ಹರಿಯಾಣದ ಘಟನೆ
ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ಮೂವರು ಮಹಿಳಾ ಪೌರಕಾರ್ಮಿಕರು ತಾವು ಋತುಚಕ್ರದಲ್ಲಿದ್ದೇವೆ ಎಂದು ಸಾಬೀತುಪಡಿಸಲು ತಮ್ಮ ಸ್ಯಾನಿಟರಿ ಪ್ಯಾಡ್‌ಗಳ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಲಾದ ಘಟನೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ ಈ ತನಿಖೆ ನಡೆಸಿತ್ತು. ಇಂತಹ ‘ಪೀರಿಯಡ್ ಶೇಮಿಂಗ್’ (ಋತುಚಕ್ರದ ಅವಮಾನ) ಘಟನೆಗಳು ಮಹಿಳೆಯರ ಘನತೆಗೆ ಧಕ್ಕೆ ತರುತ್ತವೆ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಮುಖ ಅಂಶಗಳು:
- ಮಹಿಳಾ ಕಾರ್ಮಿಕರಿಗೆ ಋತುಚಕ್ರದ ನೋವಿನ ಕಾರಣ ಭಾರೀ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೇ ಹೊರತು ಅವರನ್ನು ಅವಮಾನಿಸಬಾರದು ಎಂದು ಕೋರ್ಟ್ ಹೇಳಿದೆ.
- ಸರ್ಕಾರಗಳು ಈ ನಿಯಮಗಳನ್ನು ಜಾರಿಗೆ ತರಲು ವಿಫಲವಾದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

