ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ದಾಂಪತ್ಯ ಲೋಕದಲ್ಲಿ ಗ್ರೇ ಡಿವೋರ್ಸ್’ (Grey Divorce) ಮತ್ತು ಸೈಲೆಂಟ್ ಡಿವೋರ್ಸ್ (Silent Divorce) ಎಂಬ ಪದಗಳು ಹೆಚ್ಚು ಚರ್ಚೆಯಾಗಿದ್ದವು. ಆದರೆ ಈಗ 50 ಮತ್ತು 60ರ ಹರೆಯದ ದಂಪತಿಗಳ ನಡುವೆ ಮೆನೋ-ಡಿವೋರ್ಸ್ (Meno-divorce) ಎಂಬ ಹೊಸ ಟ್ರೆಂಡ್ ಆತಂಕ ಮತ್ತು ಕುತೂಹಲ ಎರಡನ್ನೂ ಮೂಡಿಸುತ್ತಿದೆ. ದಶಕಗಳ ಕಾಲ ಜೊತೆಯಾಗಿ ಬಾಳಿದ ಜೋಡಿಗಳು ಹಠಾತ್ ಬೇರೆಯಾಗಲು ನಿರ್ಧರಿಸುತ್ತಿರುವುದರ ಹಿಂದೆ ಕೇವಲ ಮನಸ್ತಾಪಗಳಿಲ್ಲ, ಬದಲಿಗೆ ದೈಹಿಕ ಮತ್ತು ಹಾರ್ಮೋನ್ ಬದಲಾವಣೆಗಳ ದೊಡ್ಡ ಪಾತ್ರವಿದೆ.
ಏನಿದು ಮೆನೋ-ಡಿವೋರ್ಸ್?
ಏನಿದು ಮೆನೋ-ಡಿವೋರ್ಸ್?
ಮೆನೋಪಾಸ್ (ಋತುಬಂಧ) ಅಥವಾ ಪೆರಿಮೆನೋಪಾಸ್ ಹಂತದಲ್ಲಿರುವ ಮಹಿಳೆಯರು ವಿಚ್ಛೇದನಕ್ಕೆ ಮುಂದಾಗುವುದನ್ನು ವಿವರಿಸಲು ಬಳಸುವ ಹೊಸ ಪದವಿದು. ಮಧ್ಯವಯಸ್ಸಿನಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಮಹಿಳೆಯರು ತಮ್ಮ ದೀರ್ಘಕಾಲದ ಮದುವೆಯನ್ನು ಮರುಮೌಲ್ಯಮಾಪನ ಮಾಡಲು ಪ್ರೇರೇಪಿಸಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಅದನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬರಬಹುದು ಎಂಬುದನ್ನು ಈ ಪದ ಸೂಚಿಸುತ್ತದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, 45-65 ವರ್ಷ ವಯಸ್ಸಿನ ಅನೇಕ ಮಹಿಳೆಯರು ವಿಚ್ಛೇದನದ ಬಗ್ಗೆ ಯೋಚಿಸುತ್ತಿದ್ದು, ಈ ನಿರ್ಧಾರದ ನಂತರ ತಾವು ಹಿಂದೆಂದಿಗಿಂತಲೂ ಹೆಚ್ಚು ನೆಮ್ಮದಿಯಿಂದ ಇರುವುದಾಗಿ ವರದಿ ಮಾಡಿದ್ದಾರೆ. ಗಮನಾರ್ಹವೆಂದರೆ, ಈ ವಯೋಮಾನದ ವಿಚ್ಛೇದನಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ಮಹಿಳೆಯರಿಂದಲೇ ಪ್ರಾರಂಭವಾಗುತ್ತಿವೆ.
ಮಧ್ಯವಯಸ್ಸಿನ ಮೌನ ವಿಚ್ಛೇದನ
ಮಧ್ಯವಯಸ್ಸು ಎನ್ನುವುದು ಹಠಾತ್ ಆಗಿ ಎದುರಾಗುವ ಬಿಕ್ಕಟ್ಟಲ್ಲ. ಬದಲಾಗಿ, ಇದು ದಶಕಗಳ ಕಾಲದ ಸಹನೆ, ರಾಜಿ ಮತ್ತು ತ್ಯಾಗಗಳ ನಂತರದ ಒಂದು ಲೆಕ್ಕಾಚಾರದ ಹಂತ. ಇಷ್ಟು ದಿನ ವೃತ್ತಿಜೀವನ ಮಕ್ಕಳ ವಿದ್ಯಾಭ್ಯಾಸ ಮತ್ತು ಕೌಟುಂಬಿಕ ಜವಾಬ್ದಾರಿಗಳಲ್ಲೇ ಮುಳುಗಿದ್ದ ದಂಪತಿಗಳು, ದಿಢೀರನೆ ತಾವು ಪರಸ್ಪರ ಭಾವನಾತ್ಮಕವಾಗಿ ಎಷ್ಟು ದೂರವಾಗಿದ್ದೇವೆ ಎಂಬುದನ್ನು ಅರಿತುಕೊಳ್ಳುತ್ತಾರೆ.
ಇದನ್ನೇ ಮನಃಶಾಸ್ತ್ರಜ್ಞರು ಸೈಲೆಂಟ್ ಡಿವೋರ್ಸ್ ಅಥವಾ ಮೌನ ವಿಚ್ಛೇದನ ಎಂದು ಕರೆಯುತ್ತಾರೆ. ಮಹಿಳೆಯರಿಗೆ ಈ ಹಂತವು ಮೆನೋಪಾಸ್‌ನೊಂದಿಗೆ (ಋತುಬಂಧ) ತಾಳೆಯಾಗುತ್ತದೆ. ಇದು ಕೇವಲ ಅವರ ದೈಹಿಕ ಬದಲಾವಣೆಯಲ್ಲ ಬದಲಿಗೆ ಅವರ ಆತ್ಮಗೌರವ ಮತ್ತು ಭಾವನಾತ್ಮಕ ಶಕ್ತಿಯ ಮೇಲಿನ ದೊಡ್ಡ ಪರಿಣಾಮ. ನಿದ್ರೆಯ ಸಮಸ್ಯೆ ಮತ್ತು ಮನಸ್ಥಿತಿಯ ಏರುಪೇರುಗಳು ಹೆಚ್ಚಾದಂತೆ, ಇಷ್ಟು ದಿನ ಸರಿಹೋಗಬಹುದು ಎಂದು ನಿರ್ಲಕ್ಷಿಸಿದ್ದ ದಾಂಪತ್ಯದ ಸಮಸ್ಯೆಗಳು ಈಗ ಅಸಹನೀಯವಾಗಿ ಕಾಣತೊಡಗುತ್ತವೆ.
ವಿಚ್ಛೇದನಕ್ಕೆ ಪ್ರೇರೇಪಿಸುವ ಹಾರ್ಮೋನ್ ಕಿಡಿ
ಮೆನೋಪಾಸ್ ನೇರವಾಗಿ ವಿಚ್ಛೇದನಕ್ಕೆ ಕಾರಣವಾಗದಿದ್ದರೂ, ಅದು ದಾಂಪತ್ಯದಲ್ಲಿ ಅಡಗಿರುವ ಬಿರುಕುಗಳನ್ನು ಸ್ಪಷ್ಟವಾಗಿ ತೋರಿಸುವ ಕನ್ನಡಿಯಂತೆ ಕೆಲಸ ಮಾಡುತ್ತದೆ:
ಭಾವನಾತ್ಮಕ ಏರುಪೇರು: ಈಸ್ಟ್ರೊಜೆನ್ ಮಟ್ಟ ಕುಸಿಯುವುದರಿಂದ ಉಂಟಾಗುವ ನಿದ್ರಾಹೀನತೆ, ಆತಂಕ ಮತ್ತು ಕಿರಿಕಿರಿ ಮಹಿಳೆಯರ ಸಹನೆಯನ್ನು ಪರೀಕ್ಷಿಸುತ್ತದೆ. ಈ ಹಿಂದೆ ಸಹನೀಯ ಎನಿಸುತ್ತಿದ್ದ ಸಣ್ಣ ತಪ್ಪುಗಳು ಈಗ ಡೀಲ್ ಬ್ರೇಕರ್ ಆಗಿ ಬದಲಾಗುತ್ತವೆ.
ಖಾಲಿ ಮನೆಯ ಸಂಕಟ (Empty Nest Syndrome): ಮಕ್ಕಳು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಮನೆ ಬಿಟ್ಟು ಹೋದಾಗ, ದಂಪತಿಗಳು ಪರಸ್ಪರ ಎದುರಾಗಬೇಕಾಗುತ್ತದೆ. ಈ ವೇಳೆ ಬಾಂಧವ್ಯದ ಕೊರತೆ ಇದ್ದರೆ, ನಾನು ಈ ಜೀವನವನ್ನು ಹೀಗೆ ಮುಂದುವರಿಸಬೇಕೇ? ಎಂಬ ಪ್ರಶ್ನೆ ಮಹಿಳೆಯರನ್ನು ಕಾಡತೊಡಗುತ್ತದೆ.
ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ: ಇಂದಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಸಮಾಜದಲ್ಲಿ ವಿಚ್ಛೇದನದ ಬಗ್ಗೆ ಇರುವ ಕೀಳರಿಮೆ ಕಡಿಮೆಯಾಗುತ್ತಿರುವುದು ಅವರು ತಮ್ಮ ವೈಯಕ್ತಿಕ ಗೌರವ ಮತ್ತು ಸಂತೋಷಕ್ಕಾಗಿ ಧೈರ್ಯದ ಹೆಜ್ಜೆ ಇಡಲು ಪ್ರೇರೇಪಿಸುತ್ತಿದೆ.
ಹಾರ್ಮೋನ್ ಬದಲಾವಣೆಗಳು:
ಮೆನೋಪಾಸ್ ಸಮಯದಲ್ಲಿ, ಮಹಿಳೆಯರ ದೇಹದಲ್ಲಿ ಇಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಹಾರ್ಮೋನುಗಳ ಮಟ್ಟದಲ್ಲಿ ಗಮನಾರ್ಹವಾದ ಬದಲಾವಣೆಗಳು ಸಂಭವಿಸುತ್ತವೆ. ಈ ಬದಲಾವಣೆಗಳು ಮಹಿಳೆಯರಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ಉಂಟುಮಾಡಬಹುದು:
ನೆನಪಿನ ಶಕ್ತಿ ಮತ್ತು ಏಕಾಗ್ರತೆ ಕಡಿಮೆಯಾಗುವುದು: ಮರೆವು ಮತ್ತು ಯಾವುದೇ ವಿಷಯದ ಮೇಲೆ ಗಮನ ಹರಿಸಲು ಕಷ್ಟವಾಗುವುದು.
ಮನಸ್ಥಿತಿ ಬದಲಾವಣೆಗಳು (Mood Swings): ಕೋಪ, ಕಿರಿಕಿರಿ, ಖಿನ್ನತೆ ಮತ್ತು ಆತಂಕ.
ನಿದ್ರಾಹೀನತೆ (Insomnia): ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿರುವುದು.
ಹಾಟ್ ಫ್ಲಶ್ಸ್ (Hot Flashes): ತಕ್ಷಣವೇ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು.
ಲೈಂಗಿಕ ಹಿತಾಸಕ್ತಿ ಕಡಿಮೆಯಾಗುವುದು: ಲೈಂಗಿಕ ಇಚ್ಛೆ ಕಡಿಮೆಯಾಗುವುದು ಅಥವಾ ಲೈಂಗಿಕ ಕ್ರಿಯೆಯಲ್ಲಿ ನೋವು.

