ಹಾಸನ: ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ತಪ್ಪಿಸಿಕೊಂಡು ಓಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಜೂಜಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಾವಗಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜೂಜುಕೋರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗೆ ಓಡುತ್ತಿದ್ದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.
34 ವರ್ಷದ ಪ್ರವೀಣ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತದೇಹದ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

