ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಸದ್ಯ ರಾಜ್ಯದಲ್ಲಿ ಭಾರೀ ಚರ್ಚೆಯ ವಿಚಾರ. ಈ ಯೋಜನೆಯನ್ನು ರೈತರು, ವಿವಿಧ ಸಂಘಟನೆಗಳು ವಿರೋಧಿಸಿವೆ. ಕೊಪ್ಪಳದಲ್ಲಿ ಯೋಜನೆ ವಿರೋಧಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ಯೋಜನೆ ವಿಚಾರದಲ್ಲಿ ಹಲವಾರು ಜನಪ್ರತಿನಿಧಿಗಳು ಸಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಹೋರಾಟದ ಕುರಿತು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಗುರುವಾರ ಮಾತನಾಡಿ, “ಕೊಪ್ಪಳದ ಬಲ್ಡೋಟಾ ಕಾರ್ಖಾನೆ ವಿಚಾರವಾಗಿ ಸದನದಲ್ಲಿ ಸ್ಪಷ್ಟ ಉತ್ತರ ನೀಡಿದ್ದೇನೆ. ಈ ಕಾರ್ಖಾನೆಗೆ ಅನುಮತಿ ನೀಡಿರುವುದು ಕೇಂದ್ರ ಸರ್ಕಾರ. ಮಾಲಿನ್ಯ ಉಂಟುಮಾಡುವ ಯಾವುದೇ ಕೈಗಾರಿಕೆಗೆ ನಮ್ಮ ಸರ್ಕಾರ ಬೆಂಬಲ ನೀಡುವುದಿಲ್ಲ” ಎಂದು ಹೇಳಿದರು.
“ಅಲ್ಲಿನ ಮಾಲಿನ್ಯದ ಕುರಿತು ಸಮಗ್ರ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸಲು ಐಐಎಸ್ಸಿ ತಜ್ಞರ ನೆರವು ಪಡೆಯಲು ಕ್ರಮ ಕೈಗೊಂಡಿದ್ದೇವೆ. ಅವರ ವರದಿ ಆಧರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರೆಯುತ್ತೇವೆ” ಎಂದು ಸಚಿವರು ಸ್ಪಷ್ಟಪಡಿಸಿದರು.
ರೈತರ ಬೆಳೆ, ಜಮೀನು ಹಾನಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದೆದ್ದ ಕೊಪ್ಪಳದ ರೈತರು ಗವಿಮಠದಿಂದ ಮೆರವಣಿಗೆ ನಡೆಸಿ ಯೋಜನೆ ವಿರೋಧಿಸಿದ್ದಾರೆ. ಈ ಕಾರ್ಖಾನೆಯ ಹೊಗೆ ಮತ್ತು ಧೂಳಿನಿಂದ ತಮ್ಮ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಆರೋಪಿಸಿದರು.
ಒಂದು ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯಾಗಿವೆ. ಧೂಳು, ಹೊಗೆ ಬೆಳೆಯನ್ನು ನಾಶ ಮಾಡಿದೆ ಎಂದು ರೈತರು ಹೇಳಿದರು. ಬೆಳೆಗಳನ್ನು ಪ್ರದರ್ಶಿಸಲು ಅದನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದು ಆಕ್ರೋಶ ವ್ಯಕ್ತಪಡಿಸಿದರು.

