ನವದೆಹಲಿ: ಪರೀಕ್ಷೆ ಅಂದಮೇಲೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಟೆನ್ಷನ್. ಅದರಲ್ಲೂ ಸಿಬಿಎಸ್‌ಇ (CBSE) 12ನೇ ತರಗತಿಯಂತಹ ಮಹತ್ವದ ಪರೀಕ್ಷೆ ಎಂದರೆ ಕೇಳಬೇಕೆ? ಆದರೆ, ಈ ಬಾರಿಯ ಪ್ರಶ್ನೆಪತ್ರಿಕೆಯಲ್ಲಿ ನಡೆದ ಒಂದು ಎಡವಟ್ಟು ಈಗ ಇಡೀ ದೇಶಾದ್ಯಂತ ನಗು ಮತ್ತು ಅಚ್ಚರಿಗೆ ಕಾರಣವಾಗಿದೆ.ಪ್ರಶ್ನೆಪತ್ರಿಕೆಯ ಮೇಲಿದ್ದ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ವಿದ್ಯಾರ್ಥಿಗಳಿಗೆ ಕಾದಿತ್ತು ದೊಡ್ಡ ಶಾಕ್ ಅಲ್ಲಿ ಬರಬೇಕಿದ್ದ ಪ್ರಶ್ನೆಗಳ ಬದಲಿಗೆ ಪ್ಲೇ ಆಗಿದ್ದು ಯೂಟ್ಯೂಬ್ ಹಾಡು
ನಡೆದಿದ್ದೇನು?
ಪರೀಕ್ಷಾ ಪತ್ರಿಕೆಯ ನೈಜತೆಯನ್ನು ಪರಿಶೀಲಿಸಲು ನೀಡಲಾಗಿದ್ದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಅದು ಯಾವುದೇ ಶೈಕ್ಷಣಿಕ ವೆಬ್‌ಸೈಟ್‌ಗೆ ಕರೆದೊಯ್ಯುವ ಬದಲಿಗೆ ನೇರವಾಗಿ ಯುಟ್ಯೂಬ್‌ನತ್ತ ಮುಖ ಮಾಡಿತ್ತು. ಅಲ್ಲಿ ಅಮೆರಿಕದ ಖ್ಯಾತ ಗಾಯಕ ರಿಕ್ ಆಸ್ಟ್ಲಿ (Rick Astley) ಅವರ “Never Gonna Give You Up” ಎಂಬ ಹಳೆಯ ಹಿಟ್ ಹಾಡು ಪ್ಲೇ ಆಗಿದೆ ಇಂಟರ್ನೆಟ್ ಜಗತ್ತಿನಲ್ಲಿ ಇದನ್ನು “ರಿಕ್‌ರೋಲಿಂಗ್” (Rickrolling) ಎನ್ನಲಾಗುವ ಪ್ರಸಿದ್ಧ ಪ್ರಾಂಕ್ (ತಮಾಷೆ) ಎಂದು ಕರೆಯಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ (Instagram Reel) ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಿಬಿಎಸ್‌ಇ ಮಂಡಳಿಯನ್ನು ತಮಾಷೆಯಾಗಿ ಕಾಲೆಳೆಯುತ್ತಿದ್ದಾರೆ.
https://www.instagram.com/reel/DVsRC-ikbIW/?utm_source=ig_web_copy_link&igsh=MzRlODBiNWFlZA==
ಸಿಬಿಎಸ್‌ಇ (CBSE) ಸ್ಪಷ್ಟನೆ:
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಣ ಮಂಡಳಿಯು ಈ ಕೆಳಗಿನಂತೆ ಪ್ರತಿಕ್ರಿಯಿಸಿದೆ:
ಕೆಲವು ಸೆಟ್‌ಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ಕ್ಯೂಆರ್ ಕೋಡ್ ಇರುವುದು ನಿಜ.
ಪ್ರಶ್ನೆ ಪತ್ರಿಕೆಯ ಸುರಕ್ಷತೆ ಅಥವಾ ಗೌಪ್ಯತೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ.
ಪ್ರಶ್ನೆ ಪತ್ರಿಕೆಗಳು ನೈಜವಾಗಿವೆ, ಆದರೆ ಈ ತಾಂತ್ರಿಕ ತಪ್ಪನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.
ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆ:
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ:
ತಮಾಷೆಯಾಗಿ ಕಂಡವರು: ಪರೀಕ್ಷೆಯ ಒತ್ತಡದಲ್ಲಿರುವ ಮಕ್ಕಳಿಗೆ ಸಿಬಿಎಸ್‌ಇ ಒಂದು ಪುಟ್ಟ ತಮಾಷೆಯ ಉಡುಗೊರೆ (Easter Egg) ನೀಡಿದೆ, ಇದರಲ್ಲಿ ತಪ್ಪೇನಿಲ್ಲ ಎಂದು ಕೆಲವರು ಕಾಲೆಳೆದಿದ್ದಾರೆ. ಶಿಕ್ಷಣ ವ್ಯವಸ್ಥೆಯೇ ಒಂದು ಜೋಕ್ ಆಗಿದೆ” ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಗಂಭೀರವಾಗಿ ಪರಿಗಣಿಸಿದವರು: ಕ್ಯೂಆರ್ ಕೋಡ್ ಎನ್ನುವುದು ಸುರಕ್ಷತೆಯ ಭಾಗ. ಅದರಲ್ಲಿ ಇಂತಹ ತಪ್ಪುಗಳಾದರೆ ವ್ಯವಸ್ಥೆಯ ಮೇಲೆ ನಂಬಿಕೆ ಹೇಗೆ ಇಡಲಿಕ್ಕೆ ಸಾಧ್ಯ? ಎಂದು ಪೋಷಕರು ಪ್ರಶ್ನಿಸಿದ್ದಾರೆ.

