ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ ಎರಡನೇ ಚಿತ್ರ ಮಾರ್ಕ್ ನಿನ್ನೆ ಕ್ರಿಸ್‌ಮಸ್ ದಿನದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕಳೆದ ವರ್ಷ ಮ್ಯಾಕ್ಸ್ ಮೂಲಕ ಗೆದ್ದಿದ್ದ ಈ ಜೋಡಿ ಈ ಬಾರಿ ಅಂತಹದ್ದೇ ಪ್ರಯತ್ನವನ್ನು ಮಾಡಿದೆ.
ಮ್ಯಾಕ್ಸ್ ರೀತಿಯೇ ಮೂಡಿಬಂದಿರುವ ಮಾರ್ಕ್ ಅಭಿಮಾನಿಗಳ ಪಾಲಿಗೆ ಇಷ್ಟವಾದರೆ ಸಾಮಾನ್ಯ ಪ್ರೇಕ್ಷಕರಿಗೆ ಒಂದೊಮ್ಮೆ ನೋಡಬಹುದು ಎನಿಸುತ್ತದೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಮಾರ್ಕ್ ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅತ್ತ ತಮಿಳುನಾಡಿನಲ್ಲಿ ಮಾರ್ಕ್ ತಮಿಳು ಡಬಿಂಗ್ ಸಹ ಬಿಡುಗಡೆಯಾಗಿದೆ.
ಇನ್ನು ನಿನ್ನೆ ಒಂದೇ ದಿನ ಮಾರ್ಕ್ ಹಾಗೂ ಕನ್ನಡದ ಮತ್ತೊಂದು ಸ್ಟಾರ್ ಸಿನಿಮಾ 45 ಬಿಡುಗಡೆಯಾದ ಕಾರಣ ಈ ಎರಡೂ ಚಿತ್ರಗಳಿಗೂ ಸಾಮಾನ್ಯ ಪ್ರದರ್ಶನಗಳು ಲಭಿಸಿದ್ದವು. ಹೀಗಾಗಿ ಮೊದಲ ದಿನ ಮಾರ್ಕ್‌ಗೆ ನಿರೀಕ್ಷಿಸಿದ್ದ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಪ್ರದರ್ಶನಗಳು ಸಿಕ್ಕಿಲ್ಲ.
ಬೆಂಗಳೂರು ನಗರದಲ್ಲಿ ಒಟ್ಟು 471 ಪ್ರದರ್ಶನಗಳನ್ನು ಪಡೆದುಕೊಂಡ ಮಾರ್ಕ್ 90% ಬುಕಿಂಗ್ ಸಹ ಪಡೆದುಕೊಂಡಿತು. ಹೀಗೆ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಪರಿಣಾಮ ಮಾರ್ಕ್ ಮೊದಲ ದಿನ ಹೇಳಿಕೊಳ್ಳುವ ಗಳಿಕೆ ಮಾಡಲು ಸಾಧ್ಯವಾಗಿಲ್ಲ.
ಚಿತ್ರತಂಡ ಮೊದಲ ದಿನ ಚಿತ್ರ ಎಷ್ಟು ಗಳಿಸಿತು ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಆದರೆ ಬಾಕ್ಸ್‌ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ಮಾರ್ಕ್ ಮೊದಲ ದಿನದ ಗಳಿಕೆಯನ್ನು ಪ್ರಕಟಿಸಿದ್ದು, ಚಿತ್ರ ಮೊದಲ ದಿನ ಅಂದಾಜು 6.28 ಕೋಟಿ ರೂ ನೆಟ್ ಗಳಿಕೆ ಮಾಡಿದೆ. ಇದು ನೆಟ್ ಕಲೆಕ್ಷನ್ ಆಗಿದ್ದು ಗ್ರಾಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಹತ್ತಿರತ್ತಿರ 8 ಕೋಟಿ ಗಳಿಕೆ ಆದಂತಾಗಲಿದೆ. ಸುದೀಪ್ ಸ್ಟಾರ್‌ಡಂ, ಚಿತ್ರದ ಮೇಲಿದ್ದ ಕ್ರೇಜ್ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಈ ಕಲೆಕ್ಷನ್ ಹೇಳಿಕೊಳ್ಳುವಂತಹದ್ದಲ್ಲ.

